ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿದ್ದ ಎನ್‌ಕೌಂಟರ್ ಅಂತ್ಯಗೊಂಡಿದೆ.
ಏಳು ದಿನಗಳ ಕಾಲ ನಡೆದ ಈ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೊಯ್ಬಾದ ಕಮಾಂಡರ್ ಉಜೈರ್ ಖಾನ್ ಸೇರಿದಂತೆ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಎಡಿಜಿಪಿ ಪೊಲೀಸ್ ವಿಜಯ್ ಕುಮಾರ್ ಬಹಿರಂಗಪಡಿಸಿದ್ದಾರೆ. ಉಜೀರ್ ಖಾನ್ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನ ಮೃತದೇಹ ಗುರುತಿಸಬೇಕಿದೆ. ಭಯೋತ್ಪಾದಕರ ಬೇಟೆ ಈಗಲೂ ಮುಂದುವರೆದಿದ್ದು, ನಾಗರೀಕರು ಆ ಪ್ರದೇಶಕ್ಕೆ ಹೋಗದಂತೆ ವಿಜಯ್ ಕುಮಾರ್ ಮನವಿ ಮಾಡಿದ್ದಾರೆ.
ಕಳೆದ ಮಂಗಳವಾರ, ಭದ್ರತಾ ಸಿಬ್ಬಂದಿ ಅನಂತನಾಗ್ ಜಿಲ್ಲೆಯ ಕೊಕೆರೆನಾಗ್ ಪ್ರದೇಶದಲ್ಲಿ ಭಯೋತ್ಪಾದಕರ ಬೇಟೆ ಆರಂಭಿಸಿದರು. ಭಯೋತ್ಪಾದಕರು ರಹಸ್ಯ ಪ್ರದೇಶದಲ್ಲಿ ಅಡಗಿರುವ ಮಾಹಿತಿ ಪಡೆದ ನಂತರ, ಕರ್ನಲ್ ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡ ಮರುದಿನ ಬೆಳಿಗ್ಗೆ ಆ ಪ್ರದೇಶಕ್ಕೆ ತೆರಳಿತು. ಸೈನಿಕರನ್ನು ನೋಡಿದ ಭಯೋತ್ಪಾದಕರು ಏಕಕಾಲದಲ್ಲಿ ಗುಂಡಿನ ದಾಳಿ ನಡೆಸಿದರು, 19 ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್, ಜಮ್ಮು-ಕಾಶ್ಮೀರ ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಈ ದಾಳಿಯಲ್ಲಿ ಹುತಾತ್ಮರಾದರು.
ಇದೇ ಘಟನೆಯಲ್ಲಿ ಓರ್ವ ಯೋಧ ನಾಪತ್ತೆಯಾಗಿದ್ದು, ಗಡೋಲ್ ಪ್ರದೇಶದ ದಟ್ಟ ಅರಣ್ಯ ಪ್ರದೇಶದಲ್ಲಿ ಸೋಮವಾರ ಎರಡು ಮೃತದೇಹಗಳು ಪತ್ತೆಯಾಗಿವೆ. ಅವರಲ್ಲಿ ಒಬ್ಬ ಯೋಧ ಕಳೆದ ಬುಧವಾರ ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕಣ್ಮರೆಯಾಗಿದ್ದವರು ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಾನುವಾರ ಸಂಜೆ ಸಭೆಯನ್ನುದ್ದೇಶಿಸಿ ಮಾತನಾಡಿ, ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸಲಾಗುವುದು ಮತ್ತು ಭಯೋತ್ಪಾದನೆ ಅಪರಾಧಿಗಳು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.