Thursday, August 18, 2022

Latest Posts

ಅಂಕೋಲಾ| ಅಕ್ರಮವಾಗಿ ಸಾಗಿಸುತ್ತಿದ್ದ 17 ಕೋಣಗಳನ್ನು ರಕ್ಷಿಸಿದ ಪೊಲೀಸರು

ಹೊಸದಿಗಂತ ವರದಿ, ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಭಟ್ಕಳ, ಮಂಗಳೂರು, ಕೇರಳ ಭಾಗಗಳಿಗೆ ಅಕ್ರಮ ಜಾನುವಾರುಗಳ ಸಾಗಟ ಜಾಲ ನಿರಂತರವಾಗಿ ಮುಂದುವರಿದಿದ್ದು, ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಬಳಿ ಲಾರಿಯೊಂದರಲ್ಲಿ ಹಿಂಸಾತ್ಮಕವಾಗಿ ಯಾವುದೇ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ 17 ಕೋಣಗಳನ್ನು ಅಂಕೋಲಾ ಪೊಲೀಸರು ರಕ್ಷಿಸಿದ್ದಾರೆ.
ಲಾರಿ, ಮತ್ತು ಬೆಂಗಾವಲಾಗಿ ಬಂದಿದ್ದ ಇನೋವಾ ವಾಹನ ಸೇರಿದಂತೆ ಸುಮಾರು 12 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಳ್ತಂಗಡಿ ನಿವಾಸಿ ಲಾರಿ ಚಾಲಕ ಹೈದರ್ ರೆಹಮನ್ ಬ್ಯಾರಿ(40) ಅಂಕೋಲಾ ಶಿರಗುಂಜಿಯ ಬೊಮ್ಮಯ್ಯ ಬೀರಣ್ಣ ನಾಯಕ (80) ಹಾಸನ ಹಳೇಕೊಪ್ಪಲಿನ ಮಂಜೇಗೌಡ ಜವರೇಗೌಡ(62)
ಕೇರಳ ಕಾಸರಗೋಡದ ಅಬ್ದುಲ್ ರಿಯಾಜ್ ಮಹಮ್ಮದ್ (27) ಬಂಧಿತ ಆರೋಪಿಗಳಾಗಿದ್ದು
ಇನ್ನೊರ್ವ ಆರೋಪಿ ಕೇರಳದ ಅಬುಬಕರ್ ರಿಯಾಜ್ ಎಂಬಾತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.
ಆರೋಪಿತರಿಂದ 2ಲಕ್ಷ 25 ಸಾವಿರ ಮೌಲ್ಯದ 17 ಕೋಣಗಳು, 6ಲಕ್ಷ ಮೌಲ್ಯದ ಲಾರಿ 3 ಲಕ್ಷ ಮೌಲ್ಯದ ಇನೋವಾ ವಾಹನ, 47 ಸಾವಿರ ಮೌಲ್ಯದ ಮೂರು ಮೊಬೈಲ್ ಪೋನುಗಳು ಮತ್ತು 30 ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ಬೆಂಗಾವಲು ವಾಹನ: ಭಾರೀ ಪ್ರಮಾಣದಲ್ಲಿ ಜಾನುವಾರುಗಳ ಸಾಗಟ ನಡೆಯುವ ಸಂದರ್ಭದಲ್ಲಿ ಸಾಗಾಟ ಮಾಡುವ ವಾಹನದ ಬೆಂಗಾವಲಾಗಿ ಐಷಾರಾಮಿ ವಾಹನಗಳಲ್ಲಿ ಅಕ್ರಮ ದಂದೆಕೋರರು ಸಾಗುವುದು ಸಹ ಈ ಘಟನೆಯಲ್ಲಿ ಸಾಬೀತಾಗಿದ್ದು ಕೇರಳ ರಾಜ್ಯದ ನೋಂದಣಿ ಸಂಖ್ಯೆ ಇರುವ ಇನೋವಾ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ಕಡೆಯಿಂದ ಲಾರಿಯಲ್ಲಿ ಸಾಗಿಸುತ್ತಿದ್ದ 10 ಕೋಣಗಳನ್ನು ಯಲ್ಲಾಪುರ ಬಳಿ ಪೊಲೀಸರು ರಕ್ಷಿಸಿಸಿ ಮೂವರನ್ನು ಬಂಧಿಸಿದ್ದರು.
ಮಾಂಸಕ್ಕಾಗಿ ವಧೆ ಮಾಡುವ ಉದ್ದೇಶದಿಂದ ಲಕ್ಷಾಂತರ ರೂಪಾಯಿ ಮೌಲ್ಯಗಳ ಜಾನುವಾರುಗಳ ಸಾಗಟ ನಡೆಯುತ್ತಲೇ ಇದ್ದು ಇದರ ಹಿಂದೆ ಬೃಹತ್ ಜಾಲವೇ ಇರುವ ಸಾಧ್ಯತೆ ಕಂಡು ಬರುತ್ತದೆ.
ಅಂಕೋಲಾದಿಂದಲೂ ಸಾಗಾಟ?: ಪ್ರಕರಣದಲ್ಲಿ ಅಂಕೋಲಾ ಶಿರಗುಂಜಿಯ ಆರೋಪಿಯೋರ್ವನನ್ನು ಬಂಧಿಸಲಾಗಿದ್ದು ಅಕ್ರಮ ಜಾನುವಾರು ಸಾಗಾಟ ಜಾಲಕ್ಕೂ ಅಂಕೋಲಾಕ್ಕೂ ಲಿಂಕ್ ಇದೆಯೇ ಎನ್ನುವ ಗುಮಾನಿ ಬರಲು ಕಾರಣವಾಗಿದೆ, ಕೊಡಸಣಿ ಕ್ರಾಸ್ ಬಳಿ ಜಾನುವಾರು ಸಾಗಾಟ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದ್ದು ಅಲ್ಲಿಂದ ಹತ್ತಿರದ ಪ್ರದೇಶದಿಂದ ಕೋಣಗಳನ್ನು ಸಾಗಿಸಲಾಗಿದೆಯೇ ಎನ್ನುವ ಕುರಿತು ತನಿಖೆಯಿಂದ ತಿಳಿದು ಬರಬೇಕಿದೆ.
ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!