ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಅಂಕೋಲಾ:
ಪಟ್ಟಣದ ಪುರಸಭೆ ಕಚೇರಿಯ ಆವರಣದಲ್ಲಿರುವ ತರಕಾರಿ ಮಾರುಕಟ್ಟೆಗೆ ಸಹಾಯಕ ಆಯುಕ್ತ ರಾಹುಲ್ ರತನ್ ಪಾಂಡೆ ಅವರು ದಿಢೀರ್ ಭೇಟಿ ನೀಡಿ ಕೋವೀಡ್ ನಿಯಮಗಳ ಪಾಲನೆ ಮತ್ತು ಸ್ವಚ್ಛತಾ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದರು.
ಮಾರುಕಟ್ಟೆಯಲ್ಲಿನ ಕೆಲವು ಕುಂದು ಕೊರತೆಗಳ ಕುರಿತು ವ್ಯಾಪಾರಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತರು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಿ ನ್ಯೂನತೆಗಳ ಸರಿಪಡಿಸಲಾಗುವುದು, ಇದೀಗ ಮುಖ್ಯಾಧಿಕಾರಿಗಳು ಕಲ್ಪಿಸಿರುವ ವ್ಯವಸ್ಥೆಯ ಚೌಕಟ್ಟಿನಲ್ಲಿ ಬರುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.
ಕೋವೀಡ್ ನಿಯಮಾವಳಿಗಳ ಪಾಲನೆ ಪ್ರತಿಯೊಬ್ಬರಿಗೂ ಸರಿ ಸಮಾನವಾಗಿದ್ದು ಅಧಿಕಾರಿಗಳು, ವ್ಯಾಪಾರಿಗಳು, ಸಾರ್ವಜನಿಕರು ಎಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಮೊದಲಾದ ನಿಯಮಗಳನ್ನು
ಗಂಭೀರವಾಗಿ ಪರಿಗಣಿಸಿ ಪಾಲನೆ ಮಾಡಬೇಕು ಎಂದು ಸಹಾಯಕ ಆಯುಕ್ತರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಂಕೋಲಾ ತಹಶೀಲ್ಧಾರ ಉದಯ ಕುಂಬಾರ, ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕವಾಡ್, ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.