ಉಡುಪಿ: ಸಾಂಕ್ರಮಿಕ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಆ್ಯಂಟಿಜೆನ್ ರ್ಯಾಪಿಡ್ ಟೆಸ್ಟ್ ಬದಲಿಗೆ ಆರ್ಟಿ-ಪಿಸಿಆರ್ ಪರೀಕ್ಷೆಗೆ ಹೆಚ್ಚು ಆದ್ಯತೆ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಗುರುವಾರ ಉಡುಪಿ ಜಿಲ್ಲೆಯೂ ಸೇರಿದಂತೆ 2ಸಾವಿರಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳಿರುವ 11 ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ವೀಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಯವರು ಹಲವು ಸೂಚನೆಗಳನ್ನು ಕೊಟ್ಟಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಹೆಚ್ಚು ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟವರ ಸಂಪರ್ಕಿತರನ್ನು ಶೀಘ್ರ ಪತ್ತೆ ಹಚ್ಚಿ ಅವರನ್ನೂ ಪರೀಕ್ಷೆಗೊಳಪಡಿಸಬೇಕು. ಯಾವುದೇ ಜಿಲ್ಲೆಯಲ್ಲಿಯೂ ಮಾರಣಾಂತಿಕ ಪ್ರಕರಣಗಳ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಮರಣ ಪ್ರಮಾಣ ಪ್ರಮಾಣವನ್ನೂ ಕಡಿಮೆ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ’ಹೊಸ ದಿಗಂತ’ಕ್ಕೆ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಶೇ. 20ರಷ್ಟು ಪಾಸಿಟಿವ್ ದರ ಇದ್ದರೆ, ಈಗ ಅದು ಶೇ. 7-8ಕ್ಕೆ ಇಳಿದಿದೆ. ಮಾರಣಾಂತಿಕ ಪ್ರಕರಣಗಳ ಪ್ರಮಾಣ ಶೇ. 0.84ರಷ್ಟಿದೆ. ಅಲ್ಲದೇ ಜಿಲ್ಲೆಯಲ್ಲಿ ಮರಣ ಪ್ರಮಾಣವೂ ತುಂಬ ಕಡಿಮೆಯಾಗಿದೆ. ಕೋವಿಡ್ ಪರೀಕ್ಷೆ ನಡೆಸಿದ್ದರಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ದಶಲಕ್ಷ ಜನಸಂಖ್ಯೆಗೆ 85ಸಾವಿರ ಮಂದಿಯ ಪರೀಕ್ಷೆ ಮಾಡಿದರೆ, ಉಡುಪಿ ಜಿಲ್ಲೆಯಲ್ಲಿ 1ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಲ್ಲ ಜಿಲ್ಲೆಗಳಲ್ಲಿಯೂ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸದಿದ್ದರೆ, ವೈಯಕ್ತಿಕ ಅಂತರ ಕಾಪಾಡದಿದ್ದರೆ ಅಂತಹವರಿಗೆ ದಂಡ ವಿಧಿಸುವುದನ್ನು ಹೆಚ್ಚಿಸಬೇಕು. ಸರಕಾರದ ಎಲ್ಲ ಸೂಚನೆ, ಮಾರ್ಗದರ್ಶಿಗಳನ್ನು ಪಾಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ ಎಂದು ಡಿಸಿ ಜಗದೀಶ ಅವರು ವಿವರಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಕೃಷ್ಣಾದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡರು. ಉಡುಪಿ ಜಿಲ್ಲೆಯಿಂದ ಜಿಲ್ಲಾಧಿಕಾರಿಯವರ ಜೊತೆಗೆ ಜಿ.ಪಂ. ಸಿಇಒ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ್, ಡಿಎಚ್ಒ ಡಾ. ಸುಧೀರ್ಚಂದ್ರ ಸೂಡ ಹಾಗೂ ಅವರ ತಂಡ ವೀಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
ಉಡುಪಿ ಜಿಲ್ಲೆಯ ಜೊತೆಗೆ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ ಬಳ್ಳಾರಿ, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಬೆಳಗಾವಿ, ಮೈಸೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಹಾಗೂ ಬೆಂಗಳೂರು ನಗರ ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಸಿಎಂ ವೀಡಿಯೋ ಸಂವಾದ ನಡೆಸಿದರು.