ಮೂರು ವರ್ಷಗಳ ಬಳಿಕ ನಾಪೋಕ್ಲುವಿನಲ್ಲಿ ಅಪ್ಪಚೆಟ್ಟೋಳಂಡ ಹಾಕಿ ಉತ್ಸವ

ಹೊಸದಿಗಂತ ವರದಿ,ಮಡಿಕೇರಿ:

ನಾಪೋಕ್ಲುವಿನಲ್ಲಿ ಮಾ.20 ರಿಂದ ಏ.10ರವರೆಗೆ 23ನೇ ಕೊಡವ ಕೌಟುಂಬಿಕ ‘ಅಪ್ಪಚೆಟ್ಟೋಳಂಡ ಹಾಕಿ ಉತ್ಸವ-2023’ ನಡೆಯಲಿದೆ ಎಂದು ಉತ್ಸವ ಆಯೋಜಕ ಸಮಿತಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪ, ಕೊರೋನಾ ಹಿನ್ನೆಲೆಯಲ್ಲಿ ಯುವ ಸಮೂಹದ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ ನೀಡುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜನೆಯಾಗಿರಲಿಲ್ಲ. ಇದೀಗ ಕೊಟವ ಕೌಟುಂಬಿಕ ಹಾಕಿ ಉತ್ಸವಕ್ಕೆ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಮೂಲಕ ಪುನಶ್ಚೇತನ ನೀಡುವ ಪ್ರಯತ್ನ ನಡೆಯಲಿದೆಯೆಂದು ತಿಳಿಸಿದರು.
ಒಂದು ಕೋಟಿ ಅನುದಾನ: ಕೊಡವ ಕೌಟುಂಬಿಕ ಹಾಕಿ ಉತ್ಸವದ ಆಯೋಜನೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ ಅವರ ಸಹಕಾರದೊಂದಿಗೆ ಉತ್ಸವ ಆಯೋಜನಾ ಸಮಿತಿಯ ನಿಯೋಗ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಈ ಸಂದರ್ಭ ಕೌಟುಂಬಿಕ ಹಾಕಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ 1 ಕೋಟಿ ರೂ. ಅನುದಾನ ಒದಗಿಸುವುದಕ್ಕೆ ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದಾರೆ. ಮಾ.20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದೆ ಎಂದರು.
2018 ರಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ 330 ವಿವಿಧ ಕೊಡವ ಕುಟುಂಬಗಳು ಪಾಲ್ಗೊಂಡಿದ್ದವು. ಈ ಬಾರಿ ದಾಖಲೆಯ 350 ತಂಡಗಳ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಲಾಗಿದೆ. ಮುಂದಿನ ಜನವರಿ ಆರಂಭದಿಂದ ತಂಡಗಳ ನೋಂದಣಿ ಕಾರ್ಯಕ್ಕೆ ಚಾಲನೆ ದೊರಕಲಿದೆಯೆಂದು ಅವರು ತಿಳಿಸಿದರು.
ರಾಷ್ಟ್ರೀಯ ಆಟಗಾರರಿಗೆ ಗೌರವಾರ್ಪಣೆ: ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಸಂದರ್ಭ ಕೊಡಗಿನಿಂದ ರಾಷ್ಟ್ರೀಯ ಹಾಕಿ ತಂಡವನ್ನು ಪ್ರತಿನಿಧಿಸಿದ ಕೊಡವ ಸಮೂಹ ಸೇರಿದಂತೆ ಇನ್ನಿತರ ಸಮೂಹದ ಎಲ್ಲರನ್ನೈ ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು.
ಪಂದ್ಯಾವಳಿಯ ಉದ್ಘಾಟನಾ ಪಂದ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿದ ಆಟಗಾರರ ತಂಡವನ್ನು ಕರೆಸುವ ಪ್ರಯತ್ನಗಳು ನಡೆಯುತ್ತಿರುವುದಾಗಿ ತಿಳಿಸಿದ ಅವರು, ಪಂದ್ಯಾವಳಿಯು ಹಾಕಿ ಕೊಡಗು ಸಂಸ್ಥೆಯ ಸಹಕಾರದೊಂದಿಗೆ ನಡೆಯಲಿದೆಯೆಂದು ಹೇಳಿದರು.
ಪಂದ್ಯಾವಳಿಗೆ 4 ಮೈದಾನ ಬಳಕೆ:
ಒಂದು ತಿಂಗಳ ಕಾಲ ನಡೆಯುವ ಪಂದ್ಯಾವಳಿಯನ್ನು 3 ಮೈದಾನಗಳಲ್ಲಿ ನಡೆಸಲಾಗುತ್ತದೆ. ಮಳೆ ಮೊದಲಾದ ಕಾರಣಗಳಿಂದ ಪಂದ್ಯಗಳು ಮುಂದೂಡಲ್ಪಟ್ಟ ಸಂದರ್ಭಗಳಲ್ಲಿ ಬಳಸಲು ಮತ್ತೊಂದು ಮೈದಾನವನ್ನು ಸಜ್ಜುಗೊಳಿಸಲಾಗುತ್ತದೆಂದು ಮಾಹಿತಿ ನೀಡಿದ ಮನು ಮುತ್ತಪ್ಪ, ಹಾಕಿ ಉತ್ಸವದ ಜನಕ ದಿ. ಪಾಂಡಂಡ ಕುಟ್ಟಪ್ಪ ಅವರ ಪುತ್ರ ಪಾಂಡಂಡ ಬೋಪಣ್ಣ ಅವರು ಪ್ರಸ್ತುತ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾಗಿದ್ದು, ಇವರೂ ಪಂದ್ಯಾವಳಿ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಖಜಾಂಚಿ ಅಪ್ಪಚೆಟ್ಟೋಳಂಡ ವಸಂತ್ ಮುತ್ತಪ್ಪ, ಸಮಿತಿ ಸದಸ್ಯರಾದ ಅಪ್ಪಚೆಟ್ಟೋಳಂಡ ಹರೀಶ್ ಸೋಮಯ್ಯ, ಅಪ್ಪಚೆಟ್ಟೋಳವಂಡ ರವಿ ಮೊಣ್ಣಪ್ಪ ಹಾಗೂ ಅಪ್ಪಚೆಟ್ಟೋಳಂಡ ಜನತ್ ಕುಮಾರ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!