ಭಾರತದಲ್ಲಿ ಉತ್ಪಾದನೆ ಆರಂಭಿಸಿದ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಆಪಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶೀಯ ಉತ್ಪಾದನೆಗೆ ಬೆಂಬಲ ನೀಡಲು ಮೋದಿ ಸರ್ಕಾರ ಜಾರಿಗೆ ತಂದ ಉತ್ಪಾದನೆ ಆಧರಿತ ಉತ್ತೇಜನ (PLI) ಯೋಜನೆಯಡಿಯಲ್ಲಿ ಹಲವಾರು ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸುತ್ತಿವೆ. ಚೀನಾದಲ್ಲಿ ಕೋವಿಡ್‌ ಅಲೆಯ ನಂತರ ಜಾಗತಿಕ ಪೂರೈಕೆ ಸರಪಳಿಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಜಾಗತಿಕ ಟೆಕ್ ದೈತ್ಯ ಆಪಲ್‌ ಭಾರತವನ್ನು ತನ್ನ ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿಸುವತ್ತ ಮುಂದುವರೆಯುತ್ತಿದ್ದು ಈಗಾಗಲೇ ವ್ಯಾಪಕವಾಗಿ ಉತ್ಪಾದನೆಗಳನ್ನು ಪ್ರಾರಂಭಿಸುವತ್ತ ಹೆಜ್ಜೆಗಳನ್ನು ಇಟ್ಟಿದೆ. ಇದರ ಪರಿಣಾಮ ಆಪಲ್‌ ಕಳೆದ 19 ತಿಂಗಳುಗಳಲ್ಲಿ 1 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಆ ಮೂಲಕ ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತನಾಗಿ ಹೊರಹೊಮ್ಮಿದೆ.

ಆಪಲ್‌ ಕಂಪನಿಗೆ ಚಾರ್ಜರ್‌ ಇತ್ಯಾದಿ ಬಿಡಿಭಾಗಗಳನ್ನು ಪೂರೈಕೆ ಮಾಡುವವರು ಸೇರಿದಂತೆ ಪ್ರಮುಖ ಮಾರಾಟಗಾರರು ಮತ್ತು ಪೂರೈಕೆದಾರರ ಪರಿಸರ ವ್ಯವಸ್ಥೆಯು ಈ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಇವೆಲ್ಲವೂ ಸರ್ಕಾರದ ಉತ್ಪಾದನೆ ಆಧರಿತ ಉತ್ತೇಜನ (PLI) ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ. ಐಫೋನ್‌ ಗೆ ಬಿಡಿಭಾಗಗಳನ್ನು ಪೂರೈಸುವ ಮೂರು ಪ್ರಮುಖ ಕಂಪನಿಗಳಾದ ಫಾಕ್ಸ್‌ಕಾನ್ ಹಾನ್ ಹೈ, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಗಳು ಒಟ್ಟಾರೆಯಾಗಿ 60 ಪ್ರತಿಶತದಷ್ಟು ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ. ಈ ಆರ್ಥಿಕ ವರ್ಷವು ಮುಗಿಯುವದರೊಳಗೆ ಇನ್ನೂ ಕೆಲವು ಸಾವಿರ ಉದ್ಯೋಗಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳಲಿವೆ ಎನ್ನಲಾಗಿದೆ.

ವಿಶೇಷವಾಗಿ ತಮಿನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾಕ್ಸ್‌ಕಾನ್ ಹಾನ್ ಹೈ ಅತಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಳನ್ನು ಸೃಷ್ಟಿಸಿದ್ದು ಬರೋಬ್ಬರಿ 35,500 ಮಂದಿಗೆ ಉದ್ಯೋಗ ನೀಡಿದೆ. ಈ ವರ್ಷವಷ್ಟೇ ಉತ್ಪಾದನೆ ಆರಂಭಿಸಿರುವ ಪೆಗಾಟ್ರಾನ್‌ ಈಗಾಗಲೇ 14 ಸಾವಿರದಷ್ಟು ಉದ್ಯೋಗ ಸೃಷ್ಟಿಯ ಮೂಲಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿರುವ ವಿಸ್ಟ್ರಾನ್ 12,800 ಉದ್ಯೋಗಗಳನ್ನು ಸೃಷ್ಟಿಸಿದೆ. ಇದಲ್ಲದೇ ಆಪಲ್‌ನ ಯಾಂತ್ರಿಕ ಭಾಗಗಳಿಗೆ ಪ್ರಮುಖ ಪೂರೈಕೆದಾರರಾಗಿರುವ ಟಾಟಾ ಎಲೆಕ್ಟ್ರಾನಿಕ್ಸ್ ಗಣನೀಯ ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ. ಇವುಗಳ ಜೊತೆ ಜಾಬಿಲ್, ಫಾಕ್ಸ್‌ಲಿಂಕ್ ಮತ್ತು ಸನ್‌ವೊಡಾ, ಸಾಲ್‌ಕಾಂಪ್ ನಂತಹ ಕಂಪನಿಗಳೂ ಕೂಡ ಹತ್ತಾರು ಸಾವಿರ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಿವೆ.

ಅಕ್ಟೋಬರ್ 6, 2020 ರಂದು ಹೊರಡಿಸಲಾದ ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸ್ಮಾರ್ಟ್‌ಫೋನ್ PLI ಯೋಜನೆಯಡಿಯಲ್ಲಿ ಐದು ವರ್ಷಗಳಲ್ಲಿ ಒಟ್ಟು 2,00,000 ನೇರ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಅಂದಾಜಿಸಲಾಗಿದೆ. ಇದಲ್ಲದೇ ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯಲ್ಲಿ ನೇರ ಉದ್ಯೋಗದ ಜೊತೆ ಮೂರು ಪಟ್ಟು ಹೆಚ್ಚು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸರ್ಕಾರ ಅಂದಾಜಿಸಿದೆ.

ಭಾರತದಲ್ಲಿ ಉತ್ಪಾದನೆ ಆರಂಭಿಸಿದ ಆಪಲ್ ಡಿಸೆಂಬರ್ 2022 ರಲ್ಲಿ1 ಶತಕೋಟಿ ಡಾಲರ್‌ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿ ದಾಖಲೆ ಸೃಷ್ಟಿಸಿದೆ. 2022ರ ಏಪ್ರಿಲ್‌ ನಿಂದ ಡಿಸೆಂಬರ್‌ ತಿಂಗಳ ಅವಧಿಯಲ್ಲಿ ಆಪಲ್‌ 30,000 ಕೋಟಿ ರೂ. ರಫ್ತುಗಳನ್ನು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!