MUST READ | ಮಕ್ಕಳ ಎದುರು ಪತ್ನಿಗೆ ಮುತ್ತು ಕೊಡೋದಕ್ಕೂ ಹೆದರ‍್ತೀರಾ? ಮಕ್ಕಳಿಗೆ ನಿಮ್ಮಿಂದ ಈ ನಿರೀಕ್ಷೆ ಇಲ್ಲ!

ಮೇಘನಾ ಶೆಟ್ಟಿ, ಶಿವಮೊಗ್ಗ

ನನ್ನ ಮಗ ಎಂಬಿಬಿಎಸ್ ಓದಿದ್ರೆ ಸಾಕು, ನಾವು ಎಷ್ಟು ಖರ್ಚು ಮಾಡೋಕೂ ರೆಡಿ, ಆಗಾಗ ಸ್ನೇಹಿತರ ಜೊತೆ ಹೋಗ್ಲಿ ಬೇಡ ಅನ್ನೋದಿಲ್ಲ, ಆದರೆ ನಮಗೆ ಹೇಳಿ ಹೋಗ್ಬೇಕು, ಮಕ್ಕಳು ನಮಗೆ ಸುಳ್ಳು ಹೇಳ್ಬಾರ್ದು, ಬೇರೆಯವರ ಮುಂದೆ ಗೌರವದಿಂದ ನಡೆದುಕೋಬೇಕು.. ಹೀಗೆ ಒಂದಲ್ಲಾ ಎರಡಲ್ಲಾ ಲಕ್ಷ ಲಕ್ಷ ನಿರೀಕ್ಷೆಗಳನ್ನು ಮಕ್ಕಳಿಂದ ಬಯಸುತ್ತೇವೆ.

ನಾವು ಮಕ್ಕಳಿಂದ ನಿರೀಕ್ಷೆ ಮಾಡುವ ಹಾಗೆ, ಮಕ್ಕಳು ನಮ್ಮಿಂದ ಸಾಕಷ್ಟು ನಿರೀಕ್ಷೆ ಮಾಡ್ತಾರೆ. ಯಾವೆಲ್ಲಾ ನಿರೀಕ್ಷೆಗಳು ನೋಡಿ..

  • ನಿಮಗೆ ಮಕ್ಕಳ ಮೇಲೆ ಬೆಟ್ಟದಷ್ಟು ಪ್ರೀತಿ ನಿಜ ಆದರೆ ಅದನ್ನು ತೋರಿಸದೇ ಹೋದರೆ? ಮಕ್ಕಳನ್ನು ಮುದ್ದು ಮಾಡೋದು, ಎಷ್ಟು ಪ್ರೀತಿಸುತ್ತೀರಿ ಎಂದು ಹೇಳೋದನ್ನು ಕಲಿಯಿರಿ.
  • ಬೇರೆಯವರ ಮಕ್ಕಳ ಜೊತೆ ಅವರನ್ನು ಕಂಪೇರ್ ಮಾಡೋದು ಅವರಿಗೆ ಸ್ವಲ್ಪವೂ ಇಷ್ಟವಿಲ್ಲ, ಅವರನ್ನೇ ತಂದು ಸಾಕಿಕೊಳ್ಳಲಿ ನಮ್ಮ ಪೋಷಕರಿಗೆ ನಾವು ಬೇಡ ಎನ್ನುವ ಭಾವನೆ ಬೆಳೆಯುತ್ತದೆ.
  • ಸ್ನೇಹಿತರಾಗಿ ವರ್ತಿಸಿ, ನೀವು ಅವರ ಬಾಸ್ ಅಲ್ಲ, ನೀವು ಅವರನ್ನು ಹೆತ್ತವರಷ್ಟೇ, ಅವರಿಂದ ಲಕ್ಷ ನಿರೀಕ್ಷೆ ಮಾಡಬೇಡಿ, ಅವರು ಒಬ್ಬ ವ್ಯಕ್ತಿ ಎನ್ನುವ ಬೇಸಿಕ್ಸ್ ನೆನಪಿರಲಿ.
  • ಪ್ರೈವೆಸಿ ಕೊಡಿ ಸ್ವಾಮಿ, ನೀವು ಮಕ್ಕಳನ್ನು ಬೆಳೆಸಿದ ರೀತಿಯ ಮೇಲೆ ನಂಬಿಕೆ ಇಡಿ, ಪ್ರೈವೆಸಿಯನ್ನು ಗೌರವಿಸಿ, ಮಕ್ಕಳ ಮೊಬೈಲ್ ಚೆಕ್ ಮಾಡೋದು, ಅವರ ಸ್ನೇಹಿತರ ಪಾರ್ಟಿಗೆ ಕದ್ದು ಹೋಗೋದು, ಅವರ ಸೈಕಲ್ ಫಾಲೋ ಮಾಡೋದು ಇದೆಲ್ಲಾ ನಿಲ್ಲಿಸಿಬಿಡಿ.
  • ಅಷ್ಟೊಂದು ಖರ್ಚು ಮಾಡಿ ಒಳ್ಳೆಯ ಕಾಲೇಜ್‌ಗೆ ಹಾಕಿದಿನಿ ಆದರೆ ಓದೋಕೇನ್ ದಾಡಿ? ಎಂದು ನಿಮಗೆ ಅನಿಸಬಹುದು, ಆದ್ರೆ ಮಕ್ಕಳನ್ನು ಕಾಲೇಜಿಗೆ ಸೇರಿಸೋದಷ್ಟೆ ನಿಮ್ಮ ಡ್ಯೂಟಿ ಅಲ್ಲ, ಮಕ್ಕಳು ಓದ್ತಿದ್ದಾರಾ, ಪರ್ಫಾಮೆನ್ಸ್ ಹೇಗಿದೆ ಎಂದು ಆಗಾಗ ವಿಚಾರಿಸೋದು ನಿಮ್ಮ ಕರ್ತವ್ಯ.
  • ನಿಮಗನಿಸುತ್ತದೆ ಮಕ್ಕಳನ್ನು ನಿಮ್ಮ ಸಮಸ್ಯೆಯಿಂದ ದೂರ ಇಟ್ಟರೆ ಅವರು ಖುಷಿಯಾಗಿರುತ್ತಾರೆ ಎಂದು, ಪಿಸಿಪಿಸಿ ಮಾತನಾಡೋದು, ಮಕ್ಕಳು ಮಲಗಿದ ಮೇಲೆ ಮಾತನಾಡೋದು, ಹಣಕಾಸಿನ ವಿಷಯ ಬಂದಾಗ ಮೌನತಾಳೋದು ಬೇಡ. ಅವರಿಗೂ ಎಲ್ಲವೂ ತಿಳಿಯಲಿ.
  • ತಂದೆ ಅಥವಾ ತಾಯಿ ಒಬ್ಬರನ್ನೊಬ್ಬರು ಎಷ್ಟು ಗೌರವದಿಂದ ಕಾಣ್ತಾರೆ ಅನ್ನೋದು ಇಲ್ಲಿ ಮುಖ್ಯ. ನಿಮ್ಮ ಪಾರ್ಟ್‌ನರ್ ಜೊತೆ ಗೌರವದಿಂದ ನಡೆದುಕೊಳ್ಳಲಿ ಅನ್ನೋದನ್ನೂ ಮಕ್ಕಳು ನಿರೀಕ್ಷೆ ಮಾಡ್ತಾರೆ.
  • ನಿಮ್ಮ ಹೆಂಡತಿ ಅಥವಾ ಗಂಡನ ಕೆನ್ನೆಗೆ ಒಂದು ಮುತ್ತು ಕೊಡೋದಕ್ಕೂ ಹಿಂದೆ ಮುಂದೆ ನೋಡ್ತೀರಾ? ಮಕ್ಕಳು ನೋಡ್ತಾರೆ ಎಂದು ಭಯಬೀಳ್ತೀರಾ? ಮಕ್ಕಳಿಗೆ ಮುತ್ತು ಕೊಟ್ಟು ಪ್ರೀತಿ ತೋರಿಸುವ ಹಾಗೆ ಅಮ್ಮನಿಗೂ ಮುತ್ತು ಕೊಟ್ಟು ಪ್ರೀತಿ ತೋರಿಸುತ್ತಿದ್ದೇನೆ ಎನ್ನುವ ರೀತಿಯಲ್ಲಿ ಯಾಕೆ ಬಿಹೇವ್ ಮಾಡೋದಿಲ್ಲ, ಅಪರಾಧ ಮಾಡಿದಂತೆ ಯಾಕೆ ವರ್ತಿಸ್ತೀರಿ?
  • ಮಕ್ಕಳು ಯಾವುದೇ ಡೇಂಜರ್ ಸಂದರ್ಭಗಳಲ್ಲಿದ್ದಾಗ ಅವರು ಆ ಸಂದರ್ಭಕ್ಕೆ ಬಂದಿದ್ದಕ್ಕೆ ಅವರನ್ನು ಬೈಯುವ ಬದಲು ಅವರಿಗೆ ಸಪೋರ್ಟ್ ಆಗಿ ನಿಲ್ಲಿ.

ಮಕ್ಕಳ ಮೇಲೆ ನಿರೀಕ್ಷೆ ಈಗಲ್ಲ, ಅವರು ಹುಟ್ಟುವ ಮುನ್ನವೇ ಇರುತ್ತದೆ. ಈ ನಿರೀಕ್ಷೆ ಮಕ್ಕಳ ಹೆಗಲಿಗೆ ಹಾಕಿ ತೂಕ ಮಾಡಬೇಡಿ, ನಿಮ್ಮ ಜೋಳಿಗೆಯಲ್ಲೇ ಇದೆಲ್ಲವೂ ಇರಲಿ. ನೀವು ನಡೆದುಕೊಳ್ಳುವ ರೀತಿಯ ಮೇಲೆ ನಿಮ್ಮ ನಿರೀಕ್ಷೆಗಳು ಸಾಕಾರವಾಗುವ ಸಾಧ್ಯತೆಗಳಿವೆ. ಮಕ್ಕಳು ಒಂದು ವಯಸ್ಸಿಗೆ ಬರುವವರೆಗೂ ಮಾತ್ರ ಮಕ್ಕಳು ಆಮೇಲೆ ಅವರೂ ನಿಮ್ಮಂತೆ ಸಮಾಜದಲ್ಲಿ ಒಬ್ಬ ವ್ಯಕ್ತಿ ಅಷ್ಟೆ ನೆನಪಿರಲಿ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!