ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೇನಾ ಹೆಲಿಕಾಪ್ಟರ್ ಪತನದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಜನರಲ್ ಬಿಪಿನ್ ರಾವತ್ ಓರ್ವ ಅತ್ಯುತ್ತಮ ಸೈನಿಕರಾಗಿದ್ದರು. ನಿಜವಾದ ದೇಶಭಕ್ತ. ಭಾರತೀಯ ಸಶಸ್ತ್ರ ಪಡೆ ಮತ್ತು ಭದ್ರತಾ ಉಪಕರಣ ಆಧುನೀಕರಣಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಸೇನೆ ಬಗ್ಗೆ ಅವರು ಹೊಂದಿದ್ದ ದೃಷ್ಟಿಕೋನ ಅಸಾಧಾರಣವಾಗಿತ್ತು. ಅವರ ನಿಧನ ನನಗೆ ತೀವ್ರ ದುಃಖ ತಂದಿದೆ. ಓಂ ಶಾಂತಿ ಎಂದು ನಮೋ ಟ್ವೀಟ್ ಮಾಡಿದ್ದಾರೆ.
ಹೆಲಿಕಾಪ್ಟರ್ ಅಪಘಾತದಲ್ಲಿ ರಾವತ್ ಅವರ ಪತ್ನಿ ಮತ್ತು ಸಶಸ್ತ್ರ ಪಡೆಗಳ ಇತರ ಸಿಬ್ಬಂದಿ ಕಳೆದುಕೊಂಡಿದ್ದೇವೆ. ಅವರು ಅತ್ಯಂತ ಶ್ರದ್ಧೆಯಿಂದ ಭಾರತಾಂಬೆಯ ಸೇವೆ ಸಲ್ಲಿಸಿದ್ದಾರೆ. ನನ್ನ ಆಲೋಚನೆ ದುಃಖತಪ್ತ ಕುಟುಂಬದೊಂದಿಗೆ ಇವೆ ಎಂದಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್
ಭಾರತ ತನ್ನ ಧೀರ ಪುತ್ರನನ್ನ ಕಳೆದುಕೊಂಡಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಿಡಿಎಸ್ ಜನರಲ್ ರಾವತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ
ಸಿಡಿಎಸ್ ರಾವತ್ ವೀರ ಸೈನಿಕರಲ್ಲಿ ಒಬ್ಬರು. ಮಾತೃಭೂಮಿಗೆ ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆ ಮತ್ತು ಬದ್ಧತೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದು, ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.