ಜ.15ರಂದು ಕೊಡಗಿನಲ್ಲಿ ಪ್ರಥಮ ಬಾರಿಗೆ ಸೇನಾ ದಿವಸ್ ಆಚರಣೆ: ಕೆ.ಪಿ.ಸೋಮಣ್ಣ

 ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನಲ್ಲಿ ಪ್ರಥಮ ಬಾರಿಗೆ ಆರ್ಮಿ ಡೇ(ಸೇನಾ ದಿವಸ) ಆಚರಿಸಲು ನಿರ್ಧರಿಸಲಾಗಿದ್ದು, ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಹಯೋಗದೊಂದಿಗೆ ಜ.15ರಂದು ಕಾರ್ಯಕ್ರಮ ನಡೆಯಲಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೆ.ಪಿ.ಸೋಮಣ್ಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೀ.ಮಾ.ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಗುವುದು. ಅಲ್ಲದೆ ಕಾಲೇಜಿನಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಲಿದ್ದು, ಮಾಜಿ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸೇನೆಯಿಂದ ನಿವೃತರಾದ ಬಳಿಕ ಇತರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆಗೈದ ಜಿಲ್ಲೆಯ ನಾಲ್ವರು ಸೈನಿಕರನ್ನು ಫೀ.ಮಾ.ಕೆ.ಎಂ.ಕಾರ್ಯಪ್ಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮಾಜಿ ಸೈನಿಕರಾದ ಹೊಸೊಕ್ಲು ಚಿಣ್ಣಪ್ಪ, ತಂಬಂಡ ನಾಣಯ್ಯ, ಕೃಷಿ ಕ್ಷೇತ್ರದಲ್ಲಿ ಗಣೇಶ್ ತಿಮ್ಮಯ್ಯ, ಸಿನಿಮಾ ಕ್ಷೇತ್ರದಲ್ಲಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ಹೆಸರನ್ನು ರಾಜ್ಯ ಸಂಘಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.

ಡಿ.18 ರಂದು ಮಡಿಕೇರಿಯಲ್ಲಿ ನಡೆದ ಮಾಜಿ ಸೈನಿಕರ ಕ್ರೀಡಾಕೂಟದಲ್ಲಿ ಮಾಜಿ ಸೈನಿಕರ ಸಮಸ್ಯೆಗಳನ್ನು ಅರಿತು ಸಮಾಜ ಸೇವಕ ನಾಪಂಡ ಮುತ್ತಪ್ಪ ಅವರು ಸಂಘದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವ ಭರವಸೆ ನೀಡಿರುವುದಾಗಿ ಸೋಮಣ್ಣ ಸಂತಸ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ಸುಧೀರ್ ಮಾತನಾಡಿ, ಡಿ.18ರಂದು ಸಂಘದ ವತಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರಿಗಾಗಿ ನಡೆದ ಆಟೋಟ ಸ್ಪರ್ಧೆ ಮತ್ತು ಬೃಹತ್ ಸಮಾವೇಶದ ಯಶಸ್ಸಿಗೆ ಕಾರಣಕರ್ತರಾದ ಮಾಜಿ ಸೈನಿಕರ ಕುಟುಂಬಕ್ಕೆ, ದಾನಿಗಳಿಗೆ, ಪೊಲೀಸ್ ಇಲಾಖೆ ಹಾಗೂ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು. ಕ್ರೀಡಾಕೂಟದಲ್ಲಿ ಸೈನಿಕರ ಕುಟುಂಬದಿಂದ ಉತ್ತಮ ಸ್ಪಂದನೆ ದೊರಕ್ಕಿದ್ದು, ಕ್ರೀಡೆಯ ಮೂಲಕ ಮಾಜಿ ಸೈನಿಕರನ್ನು ಒಗ್ಗೂಡಿಸುವ ಕೆಲಸವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!