ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ದಿನಗಳಿಂದ ಜಮ್ಮು ಕಾಶ್ಮೀರದ ಕಥುವಾದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಸಾಗುತ್ತಿದ್ದು, ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ನಡೆದ ಹಿರಾನಗರ ಕಾರ್ಯಾಚರಣೆಯಿಂದ 30 ಕಿ.ಮೀ ದೂರದಲ್ಲಿರುವ ರಾಜ್‌ಬಾಗ್‌ನ ಘಾಟಿ ಜುಥಾನಾ ಪ್ರದೇಶದ ಜಖೋಲೆ ಗ್ರಾಮದ ಬಳಿ ಕಾರ್ಯಾಚರಣೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಕುರಿತು ಮಾಹಿತಿ ಸಿಕ್ಕಿದ್ದು ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಎರಡು ಕಡೆಯಿಂದಲೂ ಗುಂಡಿನ ದಾಳಿ ನಡೆದಿದ್ದು, ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭಾನುವಾರ ಹಿರಾನಗರ ಸೆಕ್ಟರ್ನಲ್ಲಿ ಒಂದೂವರೆ ಗಂಟೆ ನಡೆದ ಗುಂಡಿನ ದಾಳಿಯಲ್ಲಿನ ಭಯೋತ್ಪಾದಕರ ಗುಂಪೇ ಇಂದಿನ ಗುಂಡಿನ ಚಕಮಕಿಯಲ್ಲೂ ಭಾಗಿಯಾಗಿದೆ. ಇವರು ಗಡಿಯಾಚೆಯಿಂದ ಹೊಸದಾಗಿ ರಚಿಸಲಾದ ಸುರಂಗದ ಮೂಲಕ ನುಸುಳಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.