ದಿಗಂತ ವರದಿ ಉಡುಪಿ:
ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಣಿಪಾಲದ ಎಂಐಟಿ ಕ್ಯಾಂಪಸ್ನಲ್ಲಿ ಒಟ್ಟು 95 ಪ್ರಕರಣಗಳು ಪತ್ತೆಯಾಗಿವೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಸೂಚನೆಯಂತೆ ಮಣಿಪಾಲ ಎಂಐಟಿ ಕ್ಯಾಂಪಸನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಒಂದು ವಾರದಿಂದ ನಿರಂತರವಾಗಿ ಎಂಐಟಿ ಕ್ಯಾಂಪಸ್ನ 5000 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಉಡುಪಿ ನಗರ ಭಾಗದಲ್ಲಿ ಹೆಚ್ಚು ಪಾಸಿಟಿವ್ ಕೇಸುಗಳು ಪತ್ತೆಯಾಗುತ್ತಿವೆ. ಸಾರ್ವಜನಿಕ ಸ್ಥಳ, ಸಮಾರಂಭಗಳಲ್ಲಿ ನಿಗಾ ವಹಿಸಬೇಕು. ಮಾಸ್ಕ್ ಧರಿಸುವಿಕೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಉಡುಪಿಯಲ್ಲಿ ಕೊರೋನಾ ಎರಡನೇ ಅಲೆ ಉಲ್ಬಣಿಸಲು ಅವಕಾಶ ಕೊಡಬಾರದು ಎಂದು ಡಿಎಚ್ಒ ಮನವಿ ಮಾಡಿದ್ದಾರೆ.