ಹೊಸದಿಗಂತ ವರದಿ, ಚಿತ್ರದುರ್ಗ:
ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಜ್ವಾನ್, ಸಲ್ಮಾನ್ ಹಾಗೂ ಲಿಂಗರಾಜ್ ಎಂಬ ಇಬ್ಬರು ಅಂತಾರಾಜ್ಯ ಡಕಾಯಿತರನ್ನು ಬಂಧಿಸಿದ ಪೊಲೀಸರು, ಬಂಧಿತರಿಂದ ೩೦೦ ಚೀಲ ಅಡಿಕೆ, ಲಾರಿ, ಕಾರು ಸೇರಿದಂತೆ ಕೋಟ್ಯಾಂತರ ಮೌಲ್ಯದ ಕಳವು ಮಾಲು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಗ್ರಾಮಾಂತರ ಠಾಣೆ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೀಮಸಮುದ್ರದಿಂದ ದೆಹಲಿಗೆ ಲಾರಿಯಲ್ಲಿ ಅಡಿಕೆ ಕೊಂಡೊಯ್ಯಲಾಗುತ್ತಿತ್ತು. ಇದರ ಜಾಡುಹಿಡಿದು ಹೊರಟಿದ್ದ ಡಕಾಯಿತರ ತಂಡ ಕೂಡ್ಲಿಗಿ ಬಳಿ ರಾತ್ರಿ ವೇಳೆಯಲ್ಲಿ ಲಾರಿ ಅಡ್ಡಗಟ್ಟಿ ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ ನಡೆಸಿತ್ತು. ನಂತರ ಅಡಿಕೆ ಲಾರಿಯನ್ನು ಕದ್ದೊಯ್ದಿದ್ದರು.
ಮೂರು ತಂಡಗಳಾಗಿ ಯೋಜನಾಬದ್ಧವಾಗಿ ಡಕಾಯಿತಿ ನಡೆಸಿದ್ದ ಕಳ್ಳರು ಕದ್ದ ಅಡಿಕೆಯನ್ನು ಚಿಕ್ಕಮಗಳೂರು ಜಿಲ್ಲೆಯ ಬಿಲ್ಲಹಳ್ಳಿ ಗ್ರಾಮಕ್ಕೆ ಕೊಂಡೊಯ್ದು ಮಾರಾಟ ಮಾಡಿದ್ದರು. ಲಾರಿಯನ್ನು ಮಂಡ್ಯ ಜಿಲ್ಲೆಯ ಬೆಳ್ಳೂರು ಕ್ರಾಸ್ ಬಳಿ ಬಿಟ್ಟು ಹೋಗಿದ್ದರು. ಲಾರಿ ಟ್ರಾನ್ಸ್ಪೋರ್ಟ್ನವರು ನೀಡಿದ ದೂರಿನನ್ವಯ ಲಾರಿ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಬಳಿಕ ತನಿಖೆಯಿಂದ ಡಕಾಯಿತಿ ನಡೆದಿರುವುದು ಬೆಳಕಿಗೆ ಬಂದಿತು.
ಗ್ರಾಮಾಂತರ ಸಿಪಿಐ ಬಾಲಚಂದ್ರ ನಾಯಕ್ ಮತ್ತು ತುರುವನೂರು ಪಿ.ಎಸ್.ಐ. ಶಿವಕುಮಾರ್ ಹಾಗೂ ಸಿಬ್ಬಂದಿಯವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಅಶ್ರಫ್ಅಲಿ ಸೇರಿದಂತೆ ಒಟ್ಟು ೧೨ ಜನ ಆರೋಪಿಗಳು ಭಾಗಿಯಾಗಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕುರಿ ಕಳ್ಳರ ಬಂಧನ : ಇಬ್ಬರು ಕುರಿ ಕಳ್ಳರನ್ನು ಬಂಧಿಸಿದ ಹಿರಿಯೂರು ಪೊಲೀಸರು ಬಂಧಿತರಿಂದ ೮೦ ಸಾವಿರ ರೂ. ಮೌಲ್ಯದ ೧೧ ಕುರಿ, ಮೇಕೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ೩ ಲಕ್ಷ ಮೌಲ್ಯದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿರನ್ನು ಆಂಧ್ರಪ್ರದೇಶದ ಬುಲ್ಲೇಪುಲ್ಲಿ ಗ್ರಾಮದ ಲೋಕೇಶ್ ಹಾಗೂ ಮಾರುತಿ ಎಂದು ಗುರುತಿಸಲಾಗಿದೆ.
ಕಾಣೆಯಾಗಿದ್ದ ಮಕ್ಕಳ ಪತ್ತೆ : ಮೊಳಕಾಲ್ಮೂರು ತಾಲ್ಲೂಕಿನ ಕೆರೆಕೊಂಡಾಪುರ ಗ್ರಾಮದಲ್ಲಿ ಕಾಣೆಯಾಗಿದ್ದ ಲಿಂಕೇಶ ಹಾಗೂ ಜೀವನ್ ಎಂಬ ಇಬ್ಬರು ಮಕ್ಕಳನ್ನು ೨೪ ಗಂಟೆಯೊಳಗೆ ರಾಂಪುರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಟವಾಡುತ್ತಿದ್ದ ಮಕ್ಕಳು ಏಕಾಏಕಿ ಕಾಣೆಯಾಗಿದ್ದರು. ಯಾರೋ ಅಪಹರಿಸಿರಬಹುದೆಂದು ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮಕ್ಕಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮನೆಯಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಕಾರಿನಲ್ಲಿ ಮರುದಿನ ಬೆಳಿಗ್ಗೆ ೭ ಗಂಟೆ ಸುಮಾರಿನಲ್ಲಿ ಯಾರೋ ಶಬ್ಧ ಮಾಡುವುದು ಕೇಳಿಬಂದಿತು. ಬಳಿಕ ಹತ್ತಿರ ಹೋಗಿ ನೋಡಿದಾಗ ಮಕ್ಕಳು ಕಾರಿನಲ್ಲಿರುವುದು ಪತ್ತೆಯಾಗಿದೆ.
ಬಳಿಕ ಮಕ್ಕಳನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿದ್ದು, ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಪಾಂಡುರಂಗಪ್ಪ, ಗ್ರಾಮಾಂತರ ಸಿಪಿಐ ಬಾಲಚಂದ್ರನಾಯಕ್ ಮತ್ತಿತರರು ಹಾಜರಿದ್ದರು.