ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಕಮೆಂಗ್ ನದಿ ನೀರು ಕಪ್ಪಾಗಿ, ಲಕ್ಷಾಂತರ ಜಲಚರಗಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ನೀರಿನಲ್ಲಿ ಕರಗುವ ರಾಸಾಯನಿಕ ಪ್ರಮಾಣ ಕ್ರಮೇಣ ಹೆಚ್ಚಾಗಿರುವ ಪರಿಣಾಮ ನದಿ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಇದರ ಇದರಿಂದ ಲಕ್ಷಾಂತರ ಜಲಚರಗಳು ಮೃತಪಟ್ಟಿವೆ ಎಂದು ಮೀನುಗಾರಿಕೆ ಇಲಾಖೆ ತಿಳಿಸಿದೆ.
ಪೂರ್ವ ಕಮಂಗ್ ಜಿಲ್ಲೆಯಲ್ಲಿನ ನದಿ ನೀರಿನ ಬಣ್ಣ ಬದಲಾಗಿರುವುದು ಜಲಚರಗಳ ಉಸಿರಾಟ ಹಾಗೂ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಯಾರು ಕೂಡ ಈ ಮೀನುಗಳನ್ನು ಸೇವಿಸಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ಲೀಟರ್ ನೀರಿನಲ್ಲಿ ಕರಗುವ ರಾಸಾಯನಿಕ ಪ್ರಮಾಣ(ಟಿಡಿಎಸ್) 300-1200 ಮಿ.ಗ್ರಾಂ ಇರಲಿದೆ ಆದರೆ ಈ ನದಿ ನೀರಿನಲ್ಲಿ ಟಿಡಿಎಸ್ ಪ್ರಮಾಣ ಪ್ರತಿ ಲೀಟರ್ ಗೆ 6,800 ಮಿ.ಗ್ರಾಂ ನಷ್ಟಾಗಿದೆ ಎಂದು ಜಿಲ್ಲಾ ಮೀನುಗಾರಿಕೆ ಅಭಿವೃದ್ಧಿ ಅಧಿಕಾರಿ ಹಾಲಿ ತಾಜೋ ಹೇಳಿದ್ದಾರೆ.
ಆದರೆ ಗ್ರಾಮಸ್ಥರು ಮಾತ್ರ ಅಧಿಕಾರಿಗಳ ಈ ವರದಿಯನ್ನು ತಳ್ಳಿ ಹಾಕಿದ್ದು, ನೀರು ಕಪ್ಪಾಗಲೂ ನೆರೆ ರಾಷ್ಟ್ರ ಚೀನಾದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟುಗಳು ಹಾಗೂ ಅಲ್ಲಿನ ಕಾಮಗಾರಿಗಳೇ ಕಾರಣ ಎಂದಿದ್ದಾರೆ.