ಆರ್ಯನ್‌ ಖಾನ್ ಡ್ರಗ್ಸ್ ಪ್ರಕರಣ: ಸಿಬಿಐ ಮುಂದೆ ಹಾಜರಾದಾಗ ‘ಸತ್ಯಮೇವ ಜಯತೆ’ ಎಂದ ಸಮೀರ್ ವಾಂಖೆಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಾಲಿವುಡ್​ ನಟ ಶಾರುಖ್ ಖಾನ್​ ಮಗ ಆರ್ಯನ್‌ ಖಾನ್​ ರಕ್ಷಿಸಲು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪಕ್ಕೆ ಸಂಬಂಧಿಸಿದ್ದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ದ ಮುಂಬೈ ವಲಯದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ಸಿಬಿಐ ಶನಿವಾರ ಐದು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.

ಭಾರತೀಯ ಕಂದಾಯ ಸೇವೆ (ಐಆರ್​ಎಸ್) ಅಧಿಕಾರಿಯಾಗಿರುವ ವಾಂಖೆಡೆ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​ (ಬಿಕೆಸಿ)ನಲ್ಲಿರುವ ಸಿಬಿಐ ಕಚೇರಿಗೆ ಬೆಳಗ್ಗೆ ತಲುಪಿದರು. ಈ ವೇಳೆ ಸಿಬಿಐ ಕಚೇರಿಗೆ ಪ್ರವೇಶಿಸುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಸತ್ಯಮೇವ ಜಯತೆ” ಎಂದಷ್ಟೇ ಹೇಳಿದರು. ಆದರೆ, ಕಚೇರಿಯಿಂದ ಹೊರ ಬರುವ ವೇಳೆ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.

ಆರ್ಯನ್‌ ಖಾನ್ ಡ್ರಗ್‌ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅವರಿಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿತ್ತು. ಆದರೆ, ಅಂದು ಅವರು ಹಾಜರಾಗಿರಲಿಲ್ಲ. ಇಂದು ಮೊದಲ ಬಾರಿಗೆ ತನಿಖಾಧಿಕಾರಿಗಳ ಮುಂದೆ ಹಾಜರಾದರು. ಮಧ್ಯಾಹ್ನ 2 ಗಂಟೆಗೆ ಸುಮಾರು 30 ನಿಮಿಷಗಳ ಕಾಲ ಊಟಕ್ಕೆಂದು ಬಿಡುವು ಕೊಡಲಾಗಿತ್ತು. ನಂತರ ಸಿಬಿಐ ಕಚೇರಿಗೆ ಹಿಂತಿರುಗಿ ತನಿಖೆಗೆ ಸೇರಿಕೊಂಡರು. ಇದಾದ ನಂತರ ಸಂಜೆ 4:30ರ ವಿಚಾರಣೆ ಮುಗಿದ ಕಚೇರಿಯಿಂದ ತೆರಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಆರ್ಯನ್‌ ಖಾನ್​ ಅವರನ್ನು ರಕ್ಷಣೆ ಮಾಡಲು ತಂದೆ ಶಾರುಖ್ ಖಾನ್ ಅವರಿಂದ 25 ಕೋಟಿ ರೂಪಾಯಿ ಲಂಚಕ್ಕೆ ಸಮೀರ್ ವಾಂಖೆಡೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಎನ್‌ಸಿಬಿಯ ದೂರಿನ ಮೇರೆಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಂಚಕ್ಕೆ ಸಂಬಂಧಿಸಿದ ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಸುಲಿಗೆ ಬೆದರಿಕೆ ಆರೋಪದ ಮೇಲೆ ಸಿಬಿಐ ಮೇ 11ರಂದು ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಕೇಸ್​ ದಾಖಲಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!