ಹೊಸ ದಿಗಂತ ವರದಿ, ಕಲಬುರಗಿ:
ಕೊರೋನಾ ಎರಡನೇ ಅಲೆಗೆ ತತ್ತರಿಸಿದ್ದ ಕರ್ನಾಟಕ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳಿದೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳೆಲ್ಲವೂ ಮರು ಪ್ರಾರಂಭವಾಗಿ ವಿದ್ಯಾರ್ಥಿಗಳೆಲ್ಲ ಉತ್ಸಾಹದಿಂದ ಶಾಲಾ – ಕಾಲೇಜುಗಳಿಗೆ ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಆದರೆ ಭೌತಿಕ ತರಗತಿಗಳು ಆರಂಭಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಕೆಲವೊಂದು ಸಮಸ್ಯೆಗಳು ಉಧ್ಬವಿಸುತ್ತಿರುವುದು ಶೋಚನಿಯ ಸಂಗತಿಯಾಗಿದ್ದು, ಇದನ್ನು ಸರಿಪಡಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲ ಗ್ರಾಮಗಳಿಗೂ ಬಸ್ ಸೇವೆ ಪುನರಾರಂಭಿಸಿ.
ಶಾಲಾ-ಕಾಲೇಜುಗಳು ಆರಂಭವಾಗಿ ವಿದ್ಯಾರ್ಥಿಗಳು ಕಲಿಕೆಯ ಕಡೆಗೆ ಉತ್ಸಾಹದಿಂದ ಗಮನ ಹರಿಸಿದ್ದಾರೆ. ಕೋವಿಡ್ ಕಾರಣಕ್ಕೆ ಬದಲಾದ ತರಗತಿಗಳ ಸಮಯಕ್ಕೆ ಹಾಜರಾಗಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗೂ ಲಾಕ್ಡೌನ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ ಕೆಲ ಹಳ್ಳಿಗಳಲ್ಲಿ ಇನ್ನೂ ಪುನರಾರಂಭವಾಗಿಲ್ಲ. .ಇದರಿಂದಾಗಿ ರಾಜ್ಯದ ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ ಎಂದರು.
ಸಾರಿಗೆ ಇಲಾಖೆಯು ತಕ್ಷಣವೇ ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಚಾರ ಆರಂಭಿಸಬೇಕು, ಹಾಗೂ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿದರು ಸಹಿತ ಸಿಬ್ಬಂಧಿಗಳ ಕೊರತೆಯಿಂದಾಗಿ ತಡವಾಗಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ದೊರೆಯುತ್ತಿದೆ ಈ ಸಮಸ್ಯೆಯನ್ನು ಸರಿಪಡಿಸಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ತಕ್ಷಣವೇ ಬಸ್ ಪಾಸ್ ನೀಡುವಂತೆ ಆಗ್ರಹಿಸಿದರು.
ಶಿಷ್ಯವೇತನವನ್ನು ತಕ್ಷಣ ಬಿಡುಗಡೆಗೊಳಿಸಿ
ಡಿಪ್ಲೊಮಾ ಇಂಜಿನಿಯರಿಂಗ್, ಸ್ನಾತಕ – ಸ್ನಾತಕೋತ್ತರ ತರಗತಿಗಳಲ್ಲಿ ಮತ್ತು ಪಿ.ಎಚ್.ಡಿ ಮಾಡುತ್ತಿರುವ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗಗಳ ಮತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಿಷ್ಯವೇತನ ಪಡೆಯದೇ ಪರದಾಡುವಂತಾಗಿದೆ. ರಾಜ್ಯ ಸರಕಾರ ಈ ಎಲ್ಲ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯಾಸಿರಿ ಶಿಷ್ಯವೇತನ ಸೇರಿದಂತೆ ಎಲ್ಲಾ ವಿದ್ಯಾರ್ಥಿ ವೇತನವನ್ನು ತಕ್ಷಣಕ್ಕೆ ಬಿಡುಗಡೆಗೊಳಿಸಬೇಕೆಂದು ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕೆ ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಗೆ ಮಾಡಬೇಕೆಂದು ಹೇಳಿದರು.
ವಸತಿ ನಿಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕಿಯೆ ಪೂರ್ಣಗೊಳಿಸಿ
ರಾಜ್ಯದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಹಾಸ್ಟೆಲಗಳಿಗೆ ಅವಲಂಬಿತರಾಗಿದ್ದಾರೆ, ಹೊಸದಾಗಿ ಶಾಲಾ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ತರಗತಿಗಳು ಆರಂಭವಾಗಿವೆ, ಆದರೂ ಸಹಿತ ವಿದ್ಯಾರ್ಥಿಗಳ ವಸತಿ ನಿಲಯಗಳ ಆಯ್ಕೆ ಪ್ರಕಿಯ ಮುಗಿಯದೇ ದಿನನಿತ್ಯ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರವೂ ತಕ್ಷಣವೇ ಸಂಬಂದಪಟ್ಟ ಅಧಿಕಾರಿಗಳಿಗೆ ವಸತಿ ನಿಲಯಗಳ ಆಯ್ಕೆ ಪ್ರಕಿಯೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಸಂಘಟನಾ ಕಾರ್ಯದರ್ಶಿ ಶಿವಾನಂದ ಕಂಟಿಕರ್, ವಿ.ವಿ ಪ್ರಮುಖ್ ರಾಜಶೇಖರ ಭಾವಿಮನಿ, ಜಿಲ್ಲಾ ಸಹ ಸಂಚಾಲಕ ಅಭಿಷೇಕ್ ಬಾಳೆ, ಪ್ರಮುಖರಾದ ಶಿವಕುಮಾರ್ ಹರನೂರ್ ಇದ್ದರು.