ಅಶ್ವತ್ಥ್ ನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ: ಡಿ.ಕೆ. ಶಿವಕುಮಾರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಪಿಎಸ್ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ‘ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಅಶ್ವತ್ಥ ನಾರಾಯಣ ಅವರು ವಿಶ್ವಮಾನವ ಎಂದು ಹೇಳಿಕೊಂಡಿರುವುದನ್ನು ಗೇಲಿ ಮಾಡಿರುವ ಡಿ ಕೆ ಶಿವಕುಮಾರ್, ‘ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ಅವರು ರಾಮನಗರವನ್ನು ಕ್ಲೀನ್ ಮಾಡುತ್ತೇವೆ ಎಂದಿದ್ದರು, ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ಇಲಾಖೆ ಕುಲಸಚಿವರ ನೇಮಕ ವಿಚಾರವಾಗಿ ಗೊಂದಲ ಸೃಷ್ಟಿಸಿದ್ದರು. ಅವರ ನೇಮಕ ಮಾಡಿದ್ದು ಯಾರು? ಇನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಶಿಕ್ಷಣ ಇಲಾಖೆಯೇ ದೂರು ನೀಡಿದೆ. ಆ ಕುಲಸಚಿವರು ಯಾರ ಮನೆಗೆ, ಎಷ್ಟು ಬಾರಿ ಹೋಗಿದ್ದಾರೆ? ಅವರ ಸಚಿವರ ಒಡನಾಟ ಏನು? ಅವರ ನೇತೃತ್ವ ಇರುವ ಸಂಸ್ಥೆಗಳಲ್ಲಿ ಯಾವ ರೀತಿ ಅಕ್ರಮ ನಡೆಯುತ್ತಿದೆ? ಅಲ್ಲೆಲ್ಲ ವಿಶ್ವದ ನಂಟಿದೆ ಎಂದು ಅವರೇ ಹೇಳುವುದಾದರೆ ಎಲ್ಲ ಅಕ್ರಮಗಳಿಗೂ ಅವರೇ ಪಿತಾಮಹಾ ಅಲ್ಲವೇ? ಎಲ್ಲ ಭ್ರಷ್ಟಾಚಾರಗಳಿಗೆ ವಿಶ್ವಮಾನವ ಅವರೇ ಅಲ್ಲವೇ? ಎನ್ಇಪಿ ನಾನೇ ಮೊದಲು ಜಾರಿಗೆ ತರುತ್ತೇನೆ ಎಂದು ಹೆಗಲು ತಟ್ಟಿಕೊಂಡವರು ಈಗೇನು ಮಾಡಿದ್ದಾರೆ?’ ಎಂದು ಪ್ರಶ್ನಿಸಿದ್ದಾರೆ.
ಯತ್ನಾಳ್ ಅವರು ಕೆಪಿಎಸ್ ಸಿ ಸದಸ್ಯರು ಹಾಗೂ ಅಧ್ಯಕ್ಷರು ನೇಮಕಕ್ಕೆ ಹಣ ನೀಡಿದ್ದಾರೆ ಎಂದೆಲ್ಲಾ ಹೇಳಿದ್ದಾರೆ. ವಿಶ್ವನಾಥ್ ಅವರು ಟೆಂಡರ್ ನೀಡುವ ಮೊದಲು ಕಮಿಷನ್ ಪರ್ಸೆಂಟೇಜ್ ನಿಗದಿಯಾಗಿದೆ ಎಂದು ಹೇಳಿದ್ದಾರೆ. ಇಂತ ಯಾವ ಹೇಳಿಕೆ ನೀಡಿದವರಿಗೂ ನೊಟೀಸ್ ನೀಡದೇ, ಸಿಐಡಿಯಿಂದ ಕೇವಲ ಪ್ರಿಯಾಂಕ ಖರ್ಗೆ ಅವರಿಗೆ ಮಾತ್ರ ನೊಟೀಸ್ ಹೋಗಿರುವುದೇಕೆ ಎಂಬುದು ಡಿ ಕೆ ಶಿವಕುಮಾರ್ ಪ್ರಶ್ನೆ.
ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಜಾರಿ ಮಾಡಿರುವವರು ಮೊದಲು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ನೊಟೀಸ್ ನೀಡಬೇಕು. ಸದನದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಈ ನೇಮಕಾತಿ ಅಕ್ರಮ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದು ಐದು ಬಾರಿ ಉತ್ತರಿಸಿದ್ದಾರೆ. ಆದರೂ ಆರೋಪಿಗಳನ್ನು ಬಂಧಿಸಿ, ಜೈಲಿಗೆ ಹಾಕಿ, ಎಫ್ಐಆರ್ ದಾಖಲಿಸಲಾಗುತ್ತಿದೆ? ಹಾಗಾದರೆ ಗೃಹ ಸಚಿವರು ಹೇಳಿದ್ದು ಸುಳ್ಳಲ್ಲವೇ? ಎಂದು ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!