ಪುನೀತ್ ಗೆ ಮರಣೋತ್ತರ ಡಾಕ್ಟರೇಟ್ ಪ್ರದಾನ ವೇಳೆ ಭಾವುಕರಾದ ಅಶ್ವಿನಿ, ರಾಘವೇಂದ್ರ ರಾಜ್ ಕುಮಾರ್

ಮೈಸೂರು: ದಿ.ಪುನೀತ್ ರಾಜ್‌ ಕುಮಾರ್ ( ಮರಣೋತ್ತರ) ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡುವ ವೇಳೆ, ಗೌರವ ಸ್ವೀಕರಿಸಿದ ಪತ್ನಿ ಅಶ್ವಿನಿ ಹಾಗೂ ಸ್ಥಳದಲ್ಲಿದ್ದ ನಟ ರಾಘವೇಂದ್ರ ರಾಜ್ ಕುಮಾರ್ ಭಾವುಕರಾದರು.

ಮಂಗಳವಾರ ಕ್ರಾಫರ್ಡ್ ಹಾಲ್ ನಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಗೆಹ್ಲೋಟ್ ಅವರು ಪುನೀತ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಿದಾಗ, ನಟ ಪುನೀತ್ ರಾಜ್‍ಕುಮಾರ್ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಅನುರಣಿಸಿತು. ಎಲ್ ಇಡಿ ಸ್ಕ್ರೀನ್ ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ ಹಲವು ಚಿತ್ರಗಳ ತುಣುಕು ಪ್ರದರ್ಶಿಸಲಾಯಿತು.

ಸಭೆಯ ಕೆಳಗೆ ಕುಳಿತಿದ್ದ ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಪ್ರಶಸ್ತಿ ನೀಡುವಾಗ ಭಾವುಕರಾದರು. ಇದೇ ವೇಳೆ 15 ಚಿನ್ನದ ಪದಕ ಪಡೆದ ಜಿ.ಎಂ.ಭಾವನ ಅವರನ್ನು ಕರೆದು ರಾಘವೇಂದ್ರ ರಾಜಕುಮಾರ್ ಬೆನ್ನು ತಟ್ಟಿ ಅಭಿನಂದಿಸಿದರು. ಬಳಿಕ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಪರವಾಗಿ ಮಾತನಾಡಿದ ಅವರು ಜೀವನ ಒಂದು ಚಕ್ರ ಎಂದು ಹೇಳುತ್ತಾರೆ. ನನ್ನ ತಂದೆ ರಾಜ್ ಕುಮಾರ್ ಅವರಿಗೆ ಇದೇ ವಿಶ್ವವಿದ್ಯಾನಿಲಯದಿಂದ 1976 ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿದಾಗ ಅವರಿಗೆ ಆಗ 47 ವರ್ಷ. ನನ್ನ ತಮ್ಮ ಪುನೀತ್ ಗೆ ಕೇವಲ 9 ತಿಂಗಳಾಗಿತ್ತು. ಆದರೆ ಈಗ ಆತನಿಗೆ 47 ವರ್ಷ ವಯಸ್ಸು. ಇದೇ ವಿಶ್ವವಿದ್ಯಾನಿಲಯದಿಂದ ಪುನೀತ್ ಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ಇದರಿಂದಾಗಿ ನಮಗೆ ಜವಾಬ್ದಾರಿಯ ಭಾರ ಹೆಚ್ಚಿದೆ. ಪುನೀತ್ ಅವರ ಸಮಾಜ ಸೇವೆಯನ್ನು ಮುಂದುವರಿಸುತ್ತೇವೆ. ಹೆಚ್ಚು ಸೇವೆಯ ಕೆಲಸ ಮಾಡುತ್ತವೆ ಎಂದು ಹೇಳಿದರು.

ರ‍್ಯಾಂಕ್ ವಿಜೇತರಿಗೆ ಎರಡು ಚಿನ್ನದ ಪದಕ
ಮುಂದಿನ ವರ್ಷದಿಂದ ರ‍್ಯಾಂಕ್ ವಿಜೇತ ಮೈಸೂರು ವಿಶ್ವವಿದ್ಯಾನಿಲಯದ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ನೀಡುವುದಾಗಿ ಚಿತ್ರ ನಟ ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಘೋಷಿಸಿದರು. ಪಾರ್ವತಮ್ಮ ರಾಜ್‍ಕುಮಾರ್ ಅವರ ಹೆಸರಿನಲ್ಲಿ ಬಿಸಿನೆಸ್ ಆಡಳಿತ ವಿಭಾಗದಲ್ಲಿ ಒಂದು ಚಿನ್ನದ ಪದಕ ಹಾಗೂ ಪುನೀತ್ ರಾಜ್‍ಕುಮಾರ್ ಅವರ ಹೆಸರಿನಲ್ಲಿ ಲಲಿತಕಲಾ ವಿಭಾಗದಲ್ಲಿ ಒಂದು ಚಿನ್ನದ ಪದಕವನ್ನು ನೀಡುವುದಾಗಿ ಪ್ರಕಟಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!