ಬಾಲ್ಯವಿವಾಹಗಳ ವಿರುದ್ಧ ಅಸ್ಸಾಂ ಸರ್ಕಾರದ ಹೋರಾಟ: 2 ಸಾವಿರಕ್ಕೂ ಹೆಚ್ಚು ಜನರ ಬಂಧನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲ್ಯವಿವಾಹಗಳ ವಿರುದ್ಧ ಸಿಡಿದ್ದೆದ ಅಸ್ಸಾಂ ಸರ್ಕಾರ ಈವರೆಗೆ 2,257 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಘೋಷಿಸಿದ ರಾಜ್ಯವ್ಯಾಪಿಯ ಬಾಲ್ಯವಿವಾಹಗಳ ವಿರುದ್ಧದ ಹೋರಾಟ ಶುಕ್ರವಾರ ಪ್ರಾರಂಭವಾಗಿದ್ದು, ಮುಂದಿನ 6 ದಿನಗಳವರೆಗೆ ಇದು ಮುಂದುವರಿಯುತ್ತದೆ ಎಂದು ತಿಳಿದುಬಂದಿದೆ.

ಈ ಮದ್ಯೆ, ತಮ್ಮ ಪತಿ ಮತ್ತು ಪುತ್ರರ ಬಂಧನವನ್ನು ವಿರೋಧಿಸಿ ಮಹಿಳೆಯರು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರತಿಭಟನೆ ನಡೆಸಿದ್ದಾರೆ. ತಮರ್ಹಾ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಮಹಿಳೆಯರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ನಂತರ ಧುಬ್ರಿ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. ತಮ್ಮ ಕುಟುಂಬ ಸದಸ್ಯರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಈವರೆಗೆ 2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ (Arrest) ಮತ್ತು 4,004 ಪ್ರಕರಣಗಳನ್ನು ಇದುವರೆಗೆ ದಾಖಲಿಸಲಾಗಿದೆ. ಅಲ್ಲದೆ, 8,000 ಆರೋಪಿಗಳ ಪಟ್ಟಿಯನ್ನು ಹೊಂದಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಜತೆಗೆ ಧಾರ್ಮಿಕ ಸಂಸ್ಥೆಗಳಲ್ಲಿ ಇಂತಹ ವಿವಾಹ ಕಾರ್ಯಕ್ರಮಗಳನ್ನು ನಡೆಸಿದ 51 ಪುರೋಹಿತರು ಮತ್ತು ಕಾಜಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದೂ ಹೇಳಿದ್ದಾರೆ.

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾದವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಿಸಲಾಗುವುದು ಮತ್ತು 14-18 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಅಸ್ಸಾಂ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ನಿರ್ಧರಿಸಿದೆ.

ಮಹಿಳೆಯರ ಮೇಲಿನ ಅಕ್ಷಮ್ಯ ಮತ್ತು ಘೋರ ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!