ಪ್ರಧಾನಿ ಮೋದಿ ವಿರುದ್ಧ ಅಕ್ಷೇಪಾರ್ಹ ಟ್ವೀಟ್; ಗುಜರಾತ್‌ ಕಾಂಗ್ರೆಸ್‌ ನಾಯಕ ಜಿಗ್ನೇಶ್‌ ಮೇವಾನಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅಕ್ಷೇಪಾರ್ಹ ಟ್ವೀಟ್‌ ಗಳನ್ನು ಮಾಡಿದ್ದ ಗುಜರಾತ್‌ನ ಕಾಂಗ್ರೆಸ್‌ ನಾಯಕ ವಡಗಾಮ್‌ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿಯನ್ನು ಅಸ್ಸಾಂ ಪೊಲೀಸರು ಬುಧವಾರ ರಾತ್ರಿ ಗುಜರಾತ್‌ನ ಪಾಲನ್‌ಪುರದ ಸರ್ಕ್ಯೂಟ್ ಹೌಸ್‌ನಲ್ಲಿ ಬಂಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ʼನಾಥುರಾಮ್ ಗೋಡ್ಸೆʼ ಯ ಬೆಂಬಲಿಗರು ಎಂದು ಜಿಗ್ನೇಶ್‌ ಮೇವಾನಿ ಟ್ವಿಟರ್‌ ನಲ್ಲಿ ವಿಷಕಾರಿಕೊಂಡಿದ್ದರು. ಈ ಸಂಬಂಧ ದಾಖಲಾಗಿರುವ ದೂರಿನ ಅನ್ವಯ ಪೊಲೀಸರು ಬಂಧಿಸಿದ್ದಾರೆ. ಮಹತ್ಮಾ ಗಾಂಧಿಯವರನ್ನು ಕೊಂದ ಗೋಡ್ಸೆಯನ್ನು ʼದೇವರೆಂದೇʼ ಪರಿಗಣಿಸುವ ಮೋದಿಯವರು ಗುಜರಾತ್‌ನಲ್ಲಿನ ಕೋಮು ಘರ್ಷಣೆಗಳ ವಿರುದ್ಧವೂ ಮಾತನಾಡಬೇಕು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಜನರಿಗೆ ಕರೆನೀಡಬೇಕು ಎಂದು ಮೇವಾನಿ ಟ್ವೀಟ್‌ ಗಳನ್ನು ಮಾಡಿದ್ದರು.
ಮೇವಾನಿ ವಿರುದ್ಧ ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಭಬಾನಿಪುರದ ನಿವಾಸಿ ಅನುಪ್ ಕುಮಾರ್ ಡೇ ಎಂಬವರ ದೂರಿನ ಆಧಾರದ ಮೇಲೆ ಸೆಕ್ಷನ್ 120 ಬಿ (ಅಪರಾಧ ಪಿತೂರಿ), ಸೆಕ್ಷನ್ 153 (ಎ) (ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) 295 (ಎ) (ಸಮುದಾಯವೊಂದರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಧಾರ್ಮಿಕ ಸ್ಥಳಗಳಿಗೆ ಕಳಂಕ ಹಚ್ಚುವುದು ), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಹಾಗೂ ಐಟಿ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರಂತೆ ಪೂಜಿಸುತ್ತಾರೆ ಮತ್ತು ಪರಿಗಣಿಸುತ್ತಾರೆ ಎಂದು ಏ.೧೮ ರಂದು ಮೇವಾನಿ ಮಾಡಿದ್ದ ಸರಣಿ ಟ್ವಿಟ್‌ ಗಳ ಸಂಬಂಧ ದೂರು ದಾಖಲಿಸಲಾಗಿದೆ. ಏ.20 ರಂದು ಮೋದಿ ಗುಜರಾತ್‌ಗೆ ಭೇಟಿ ನೀಡಿದಾಗ ಕೋಮುಗಲಭೆ ನಡೆದ ಹಿಮ್ಮತ್‌ನಗರ, ಖಂಭಾತ್ ಮತ್ತು ವೆರಾವಲ್‌ನಂತಹ ಪ್ರದೇಶಗಳಲ್ಲಿ ಸಾಮರಸ್ಯ ಕಾಪಾಡುವಂತೆ ಜನರಿಗೆ ಆಗ್ರಹಿಸಬೇಕು ಎಂದು ಮೇವಾನಿ ಅವರ ಟ್ವೀಟ್‌ ಗಳಲ್ಲಿತ್ತು. ಈ ಟ್ವೀಟ್‌ ಗಳಲ್ಲಿ ಜನರನ್ನು ಪ್ರಚೋದಿಸಿ ಕೋಮುಭಾವನೆ ಕೆರಳಿಸುವ ಉದ್ದೇಶಗಳು ಅಂತರ್ಗತವಾಗಿತ್ತು ಎಂದು ಡೇ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹುಜರಾತ್‌ ನಲ್ಲಿ ಸ್ವತಂತ್ರ ಶಾಸಕರಾಗಿ ಆಯ್ಕೆಯಾಗಿದ್ದ ಮೇವಾನಿ ಬಳಿಕ ಸೆಪ್ಟೆಂಬರ್ 2019 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು. ಮೇವಾನಿ ಬಂಧನ ವಿರೋಧಿಸಿ ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಮೇವಾನಿ ಬೆಂಬಲಿಗರು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!