ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ ಮಡಿಕೇರಿ:
ಅಪಘಾತವನ್ನು ನೆಪ ಮಾಡಿಕೊಂಡು ಬೋಯಿಕೇರಿ ಸಮೀಪ ಸೈನಿಕ ಕುಟುಂಬದ ಮೇಲೆ ನಡೆದಿರುವ ಗುಂಪು ಹಲ್ಲೆ ಪ್ರಕರಣ ಖಂಡನೀಯವೆಮದು ಮಕ್ಕಂದೂರು ಕೊಡವ ಸಮಾಜ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಸೈನಿಕ ಹಾಗೂ ಆತನ ಕುಟುಂಬದ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಅತ್ಯಂತ ಹೇಯ ಕೃತ್ಯವಾಗಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಹಿಳೆಯರು, ವಯೋವೃದ್ಧರು ಎಂದೂ ನೋಡದೆ ಗುಂಪು ಸೇರಿದ ಮಂದಿ ಏಕಾಏಕಿ ಹಲ್ಲೆ ನಡೆಸಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಕೊಡವ ಸಾಂಪ್ರದಾಯಿಕ ಪತ್ತಾಕ್ನ್ನು ಕಸಿದುಕೊಂಡಿದೆ ಎಂದು ಆರೋಪಿಸಿರುವ ಅವರು, ಇದು ಕೊಡವ ಸಮುದಾಯಕ್ಕೆ ಮಾಡಿದ ಅವಮಾನವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಗಡಿ ಕಾಯುವ ಯೋಧನ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಪೊಲೀಸರು ಲಘುವಾಗಿ ಪರಿಗಣ ಸಬಾರದು. ಕೂಲಂಕುಷವಾಗಿ ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಈಗಾಗಲೇ ಬಂಧನಕ್ಕೊಳಗಾಗಿ ಬಿಡುಗಡೆಯಾಗಿರುವವರ ಮೇಲೂ ಪೊಲೀಸರು ಗಂಭೀರ ಪ್ರಕರಣದ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇನ್ನು ಮುಂದೆ ಶಾಂತಿಪ್ರಿಯ ಜಿಲ್ಲೆ ಕೊಡಗಿನಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರವಿಕಾಳಪ್ಪ ಒತ್ತಾಯಿಸಿದ್ದಾರೆ.
ಎಲ್ಲಾ ಆರೋಪಿಗಳನ್ನು ಬಂಧಿಸಿ ಶಿಕ್ಷಗೆ ಗುರಿಪಡಿಸದಿದ್ದಲ್ಲಿ ಕೊಡವ ಸಮಾಜಗಳ ಮೂಲಕ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.