ದೈವ ಆರಾಧಕರು,ನರ್ತಕರ ಸಭೆ: ಅಪಹಾಸ್ಯದ ವಿರುದ್ಧ ಕ್ರಮಕ್ಕೆ ಒತ್ತಾಯ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿರುವ ತುಳುನಾಡಿನ ದೈವಸ್ಥಾನದ ಹೆಸರು, ಊರು, ದೈವ ನರ್ತಕರು, ದೈವ ಆರಾಧಕರು ಮತ್ತು ದೈವ ಸಂಪ್ರದಾಯದ ಮಾಹಿತಿಯನ್ನೊಳಗೊಂಡ ದಾಖಲೀಕರಣದ ಪುಸ್ತಕವನ್ನು ಹೊರ ತರುವ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.
ನಗರದ ಬಾಲಭವನದ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲೆಯ ದೈವ ಆರಾಧಕರು ಹಾಗೂ ದೈವ ನರ್ತಕರ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತುಳುನಾಡಿನ ದೈವಾರಾಧನೆಯ ಬಹಳಷ್ಟು ದೈವ ಕ್ಷೇತ್ರಗಳಿವೆ. ದೈವ ಆರಾಧಕರು ಹಾಗೂ ದೈವ ನರ್ತಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದೈವ ಮತ್ತು ದೈವಾರಾಧನೆಯನ್ನು ಅವಮಾನಿಸುವ, ದೈವದ ಬಗ್ಗೆ ಅಪಹಾಸ್ಯ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ. ಶಾಲಾ, ಕಾಲೇಜು ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ದೈವದ ವೇಷಭೂಷಣ ತೊಟ್ಟು ಪಾತ್ರ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದರು.
ಸರಕಾರದ ಆದೇಶದಂತೆ ದೈವ ಆರಾಧಕರು, ದೈವ ನರ್ತಕರಿಗೆ ಮಾಸಾಶನ ನೀಡುವ ಕಾರ್ಯ ಈಗಾಗಲೇ ದಕ್ಷಿಣ ಕನ್ನಡದಲ್ಲಿ ಆರಂಭಗೊಂಡಿದ್ದು, ಕೊಡಗು ಜಿಲ್ಲೆಯ ಫಲಾನುಭವಿಗಳಿಗೆ ಮಾಹಿತಿ ನೀಡುವ ಕೆಲಸ ಆಗಬೇಕು. ಜಿಲ್ಲೆಯ ದೈವಸ್ಥಾನದ ಅಭಿವೃದ್ಧಿಗೆ ಸರಕಾರಕ್ಕೆ ಮನವಿ ಸಲ್ಲಿಸುವುದು, ದೈವದ ಸೇವೆ, ಕೋಲ, ನೇಮೋತ್ಸವವನ್ನು ಕ್ರಮ ಬದ್ಧವಾಗಿ ನಡೆಸಲು ಮಾರ್ಗದರ್ಶನ ನೀಡುವುದು, ವರ್ಷಕ್ಕೊಮ್ಮೆ ದೈವ ಆರಾಧಕರ ದೈವ ನರ್ತಕರ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಕಾರ್ಯಕ್ರಮ ಆಯೋಜಿಸಿ ತುಳುನಾಡಿನ ಜಾನಪದ ವಿದ್ವಾಂಸರಿಂದ ಧಾರ್ಮಿಕ ಉಪನ್ಯಾಸ ಹಾಗೂ ಮಾಹಿತಿ ವಿನಿಮಯ ಕಾರ್ಯಕ್ರಮಗಳನ್ನು ನಡೆಸುವುದು, ಜಿಲ್ಲೆಯಲ್ಲಿ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ರಚಿಸುವುದರಿಂದ ಪ್ರತಿಯೊಂದು ಉದ್ದೇಶಗಳನ್ನು ಈಡೇರಿಸಲು ಸಹಕಾರಿಯಾಗಲಿದೆ ಹಾಗೂ ಸಂಕಷ್ಟಕ್ಕೆ ಸ್ಪಂದನೆ ದೊರೆಯಲಿದೆ ಎಂದು ರವಿ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗದ ದೈವ ಆರಾಧಕರಾ್ ರಮೇಶ್ ಪೂಜಾರಿ, ಉಮೇಶ್ ಕೆದಕಲ್, ರಾಜೇಶ್ ಒಂಟಿ ಅಂಗಡಿ, ಮುತ್ತಪ್ಪ ಪೂಜಾರಿ ಮಕ್ಕಂದೂರು, ಸದಾಶಿವ ರೈ ತಾಳತ್ತಮನೆ, ಕೃಷ್ಣಪ್ಪ ಹೆಬ್ಬೆಟ್ಟಗೇರಿ, ಲೋಹಿತ್ ಹೆಬ್ಬೆಟ್ಟಗೇರಿ, ಪೂವಪ್ಪ ಗರಗಂದೂರು, ಪವನ್ ಮರಗೋಡು, ದೇವಪ್ಪ ಕೊಯಿನಾಡು, ಗುರುವ ಮಂಜಿಕೆರೆ, ಕೋಟಿ ಪೂಜಾರಿ, ಜನಾರ್ಧನ, ರಾಜು ರೈ ಸುಂಟಿಕೊಪ್ಪ, ದಿನೇಶ್ ಉಡೋತ್, ಪವನ್ ಪೂಜಾರಿ, ಲವಿನ್ ಪೂಜಾರಿ, ಪಾಪು ರವಿ, ಸಂತೋಷ್ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!