Sunday, August 14, 2022

Latest Posts

ಸೆ.17ರಂದು ರಾಮನಗರದಲ್ಲಿ 50000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಡಾ. ರಾಕೇಶ್ ಕುಮಾರ್

ಹೊಸ ದಿಗಂತ ವರದಿ, ರಾಮನಗರ:

ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಕೋವಿಡ್ ಲಸಿಕಾ ಮೇಳವನ್ನು ಹಮ್ನಿಕೊಳ್ಳಲಾಗಿದ್ದು, 50000 ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ. ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಲಸಿಕಾ ಮೇಳದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಕೋವಿಡ್ ಲಸಿಕೆ ಪಡೆಯಲು ಜಿಲ್ಲೆಯಲ್ಲಿ 1,81,000 ಮೊದಲ ಡೋಸ್ ಹಾಗೂ ಎರಡನೇ ಡೋಸ್ ಪಡೆಯಲು 50000 ಜನರು ಬಾಕಿ ಇದ್ದು, ಲಸಿಕೆ ಪಡೆಯದೇ ಇರುವವರನ್ನು ಗುರುತಿಸಿ ಒಟ್ಟುಗೂಡಿಸುವುದು ದೊಡ್ಡ ಸವಾಲಾಗಿದ್ದು, ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಗ್ರಾಮ ಹಾಗೂ ವಾಡ್೯ ಮಟ್ಟದ ಟಾಸ್ಕ್ ಫೋರ್ಸ್‌ ಸಭೆ ಕರೆದು ಲಸಿಕೆ ನೀಡುವ ಸ್ಥಳವನ್ನು ಗುರುತಿಸಿ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಮನೆ ಮನೆ ಭೇಟಿ ಮಾಡಿ ಲಸಿಕೆ ಪಡೆಯದೆ ಇರುವ ಜನರನ್ನು ಗುರುತಿಸಿ ಲಸಿಕೆ ಪಡೆಯಲು‌ ಒಟ್ಟುಗೂಡಿಸುವ ಕೆಲಸಕ್ಕೆ ನಿಯೋಜಿಸುವಂತೆ ತಹಶೀಲ್ದಾರ್ ಗಳಿಗೆ ನಿರ್ದೇಶನ ನೀಡಿದರು.
ಲಸಿಕೆ ನೀಡಲು 318 ತಂಡಗಳನ್ನು ರಚಿಸಲಾಗುವುದು, ಪ್ರತಿ ತಂಡದಲ್ಲಿ ಮೆಡಿಕಲ್ ಆಫೀಸರ್, ವ್ಯಕ್ಸಿನೇಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಇರಲಿದ್ದಾರೆ. ಲಸಿಕೆ ಪಡೆಯುವುದರಲ್ಲಿ ಕಡಿಮೆ ಸಾಧನೆಯಾಗಿರುವ ಸ್ಥಳವನ್ನು ಗುರುತಿಸಿ, ಕಟ್ಟಡ ಕಾರ್ಮಿಕರು ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ, ಲಸಿಕೆ ನೀಡುವ ಸ್ಥಳ ಜನರಿಗೆ ಹತ್ತಿರ ಹಾಗೂ ಲಸಿಕೆ ನೀಡಲು ಯಾವುದೇ ತೊಂದರೆಯಾಗದ ಸ್ಥಳವನ್ನು ಗುರುತಿಸಿ ಯೋಜನೆ ಸಿದ್ದಪಡಿಸಿಕೊಂಡು ವರದಿ ನೀಡುವಂತೆ ತಿಳಿಸಿದರು.
ಚನ್ನಪಟ್ಟಣ ತಾಲ್ಲೂಕು-15000, ಕನಕಪುರ ತಾಲ್ಲೂಕು-15000, ರಾಮನಗರ ತಾಲ್ಲೂಕು- 10000 ಹಾಗೂ ಮಾಗಡಿ ತಾಲೂಕಿಗೆ-10000 ಗುರಿ ನಿಗದಿ ಮಾಡಿ ಜಿಲ್ಲಾಧಿಕಾರಿಗಳು ಸೆ. 17 ರಂದು ಲಸಿಕಾ ಮೇಳ ಗ್ರಾಮ ಹಾಗೂ ವಾಡ್೯ಗಳಲ್ಲಿ ಬೆಳಿಗ್ಗೆ 7.30 ಕ್ಕೆ ಪ್ರಾರಂಭವಾಗಬೇಕು ಎಂದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯ. ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಲಸಿಕಾ ಮೇಳವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ‌ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss