86 ನೇ ವಯಸ್ಸಿನಲ್ಲಿ ನವೋದ್ದಿಮೆ ಸ್ಥಾಪಿಸಿ ಯುವಕರಿಗೆ ಮಾದರಿಯಾದವರಿವರು…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಧಿಸುವುದಕ್ಕೆ ವಯಸ್ಸು ಮುಖ್ಯವಲ್ಲ ಇಚ್ಛಾಶಕ್ತಿಯೊಂದೇ ನಿಮ್ಮನ್ನು ಸಾಧನೆಯ ಶಿಖರವನ್ನೇರಿಸುತ್ತದೆ ಎಂಬುದನ್ನು ಇಳಿವಯಸ್ಸಿನಲ್ಲಿ ನವೋದ್ದಿಮೆ ಸ್ಥಾಪಿಸಿ ಯಶಸ್ವಿಯಾಗುವ ಮೂಲಕ ಈ ಹಿರಿಯ ದಂಪತಿ ತೋರಿಸಿಕೊಟ್ಟಿದ್ದಾರೆ. ನವೋದ್ದಿಮೆಗಳನ್ನು ಪ್ರೋತ್ಸಾಹಿಸೋ ಜನಪ್ರಿಯ ರಿಯಾಲಿಟಿ ಶೋ ಶಾರ್ಕ್‌ ಟ್ಯಾಂಕ್‌ ಬಗ್ಗೆ ನಿಮಗೆಲ್ಲ ಗೊತ್ತೇ ಇರುತ್ತೆ. ಕಾಲೇಜು ಓದುವ ವಿದ್ಯಾರ್ಥಿಗಳಿಂದ ಹಿಡಿದು ಮಧ್ಯವಯಸ್ಸಿಗೆ ಉದ್ಯೋಗ ಬಿಟ್ಟು ನವೋದ್ದಿಮೆ ಸಾಧಿಸಿದ ಉದ್ದಿಮೆದಾರರೆಲ್ಲ ಈ ವೇದಿಕೆಯ ಮೆಟ್ಟಿಲೇರಿದ್ದಾರೆ. ಆದರೆ 86 ನೇ ವಯಸ್ಸಿನಲ್ಲಿ ಶಾರ್ಕ್‌ ಟ್ಯಾಂಕ್‌ ಮೆಟ್ಟಿಲೇರಿ ನವೋದ್ದಿಮೆಗೆ ಹೂಡಿಕೆಯ ಆಫರ್‌ ಮುಂದಿಟ್ಟವರಲ್ಲಿ ಇವರೇ ಮೊದಲಿಗರು.

ಇಳಿವಯಸ್ಸಿನಲ್ಲಿ ʼಅವಿಮಿ ಹರ್ಬಲ್ʼ ಎಂಬ ಆಯುರ್ವೇದ ಉತ್ಪನ್ನಗಳ ನವೋದ್ದಿಮೆ ಸ್ಥಾಪಿಸಿರುವ ಇವರ ಹೆಸರು ರಾಧಾಕೃಷ್ಣ ಚೌಧರಿ. ಕೂದಲು ಮತ್ತು ಚರ್ಮದ ಆರೈಕೆಗೆ ಸಂಬಂಧಿಸಿದ ಆಯುರ್ವೇದ ಉತ್ಪನ್ನಗಳನ್ನು ಈ ನವೋದ್ದಿಮೆ ತಯಾರಿಸುತ್ತದೆ ಮೂಲತಃ ಬಿಹಾರದವರಾಗಿರುವ ಇವರು ಬಾಲ್ಯದಿಂದಲೂ ಆಯುರ್ವೇದದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರಂತೆ. ವಾಣಿಜ್ಯವಿಭಾಗದಲ್ಲಿ ಪದವಿ ಪಡೆದ ನಂತರ ಇವರು ನಂತರದಲ್ಲಿ ಆಯುರ್ವೇದದ ಕುರಿತಾಗಿ ಸಂಶೋಧನೆ ನಡೆಸಿದರು. ಕಳೆದ ಮೂರು ದಶಕಗಳಿಂದ ವಿಶೇಷವಾಗಿ ಕೂದಲು ಉದುರುವಿಕೆಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಇವರು ಕೋವಿಡ್‌ ಲಾಕ್‌ ಡೌನ್‌ ಸಮಯದಲ್ಲಿ ತಮ್ಮ ಜ್ಞಾನವನ್ನು ಪ್ರಯೋಗಿಸಿ ಕೂದಲು ಉದುರುವಿಕೆಗೆ ಬಳಸಬಹುದಾದ ಔಷಧವೊಂದನ್ನು ತಯಾರಿಸಿದರು. ಅವರ ಮಗಳು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದರಂತೆ. ಆ ಕಾರಣಕ್ಕಾಗಿಯೇ ಈ ಔಷಧವನ್ನು ಅವರು ಮೊದಲು ಕಂಡು ಹಿಡಿದರು. ಅವರ ಈ ಹೇರ್‌ ಆಯಿಲ್‌ ಅದ್ಭುತ ಫಲಿತಾಂಶ ನೀಡಿತು. ನಂತರ ತಮ್ಮ ಬಳಗದವರಿಗೆ ಉಚಿತವಾಗಿ ಈ ಎಣ್ಣೆ ತಯಾರಿಸಿಕೊಟ್ಟರಂತೆ. ಅದೂ ಕೂಡ ಉತ್ತಮ ಫಲಿತಾಂಶ ನೀಡಿದ್ದರಿಂದ ಇದನ್ನೇ ಆಧಾರವಾಗಿಟ್ಟುಕೊಂಡು ಒಂದು ಉದ್ಯಮವನ್ನು ಸ್ಥಾಪಿಸಿಯೇ ಬಿಟ್ಟರು. ಅದಕ್ಕೆ ಅವಿಮೀ ಹರ್ಬಲ್‌ ಎಂದು ನಾಮಕರಣ ಮಾಡಿದರು.

ಹೀಗೆ ಹುಟ್ಟಿದ ಗುಜರಾತ್ ಮೂಲದ ಸ್ಟಾರ್ಟಪ್ Avimee ಮೂರು ಉತ್ಪನ್ನಗಳೊಂದಿಗೆ ಆಗಸ್ಟ್ 2021 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಇಂದು, ಇದು 27 ಉತ್ಪನ್ನಗಳನ್ನು ಹೊಂದಿದೆ. ದೇಶದ ಹಲವು ಭಾಗಗಳಲ್ಲಿ ಇದು ಲಭ್ಯವಿದೆ. ಸದ್ಯದಲ್ಲೇ ವಿದೇಶಕ್ಕೂ ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದು ದುಬೈನಲ್ಲಿ ತನ್ನ ವ್ಯಾಪಾರ ಪ್ರಾರಂಭಿಸಲು ಸಜ್ಜಾಗಿದೆ. ಉತ್ಪನ್ನಗಳು ಕಂಪನಿಯ ವೆಬ್‌ಸೈಟ್‌ನಲ್ಲಿ ಮತ್ತು ಅಮೆಜಾನ್‌ನಂತಹ ಮಾರುಕಟ್ಟೆಗಳಲ್ಲಿ ಲಭ್ಯವಿದೆ. 2022ನೇ ಆರ್ಥಿಕ ವರ್ಷದಲ್ಲಿ ಶೂನ್ಯ ಮಾರ್ಕೆಟಿಂಗ್ ವೆಚ್ಚದೊಂದಿಗೆ 6.5 ಕೋಟಿ ರೂ. ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿರುವುದಾಗಿ Avimee ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!