ಇಂಧನ ಇಲಾಖೆ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಕ್ರಮ: ಸಚಿವ ಸುನೀಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಧನ ಇಲಾಖೆಯ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂಧನ ಇಲಾಖೆ ಅಧೀನದಲ್ಲಿ ಬರುವ ಎಲ್ಲ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.
ವಿದ್ಯುತ್ ಚಾಲಿತ ವಾಹನಗಳ ಬೆಲೆ, ಪೆಟ್ರೋಲ್ ಹಾಗು ಡಿಸೆಲ್ ವಾಹನಗಳ ಬೆಲೆಗಿಂತ ದುಬಾರಿ ಇರುವುದರಿಂದ, ಇಲೆಕ್ಟ್ರಿಕ್ ವಾಹನ ಬಳಕೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಇಲೆಕ್ಟ್ರಿಕ್ ವಾಹನ ಬಳಸುವುದು ನಮ್ಮ ಇಲಾಖೆಯ ಆದ್ಯತೆ ಆಗಿದ್ದು, ಹಣಕಾಸು ಇಲಾಖೆ ಸಮ್ಮತಿಸಿದರೆ, ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಇವಿ ಜಾಗೃತಿ ಪೋರ್ಟಲ್ ಮತ್ತು ದಿಕ್ಸೂಚಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಇಲೆಕ್ಟ್ರಿಕ್ ವಾಹನ ಬಳಕೆಗೆ ಸರಕಾರ ಉತ್ತೇಜನ ನೀಡುತ್ತಿದ್ದು, ಜೂನ್ 23 ರಿಂದ ಜೂನ್ 30ರವರೆಗೆ ರಾಜ್ಯದಲ್ಲಿ ಇವಿ ಚಾರ್ಜಿಂಗ್ ಸೆಂಟರ್ ಗಳ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!