ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದೆ. 6 ದಿನಗಳಲ್ಲಿ ಭಾರತದ ಕ್ರೀಡಾಳು ಒಟ್ಟು 20 ಪದಕಗಳನ್ನು ಗೆದ್ದಿದ್ದಾರೆ. ಈ ಐತಿಹಾಸಿಕ ಸಾಧನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕ್ರೀಡಾಪಟುಗಳಿಗೆ ಕರೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೈ ಪ್ರವಾಸದಲ್ಲಿದ್ದು, ಇದರ ನಡುವೆ ಬಿಡುವು ಮಾಡಿಕೊಂಡು ಭಾರತೀಯ ಕ್ರೀಡಾಪಟುಗಳನ್ನು ಕರೆ ಮಾಡಿ ಹುರಿದುಂಬಿಸಿರುವುದು ವಿಶೇಷ. ಅಲ್ಲದೆ ಈ ವೇಳೆ ಭಾರತದ ಪ್ಯಾರಾಲಿಂಪಿಕ್ ಆಟಗಾರರಾದ ಯೋಗೇಶ್ ಕಥುನಿಯಾ, ಸುಮಿತ್ ಅಂತಿಲ್, ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರೊಂದಿಗೆ ಮಾತನಾಡಿದರು.
ಕ್ರೀಡಾಪಟುಗಳಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ, ನಿಮ್ಮ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ ಎಂದು ಶ್ಲಾಘಿಸಿದರು. ಇದೇ ವೇಳೆ ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿರುವ ಯೋಗೇಶ್ ಕಥುನಿಯಾ ಅವರೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ, ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಯೋಗೇಶ್ ಕಥುನಿಯಾ ಅವರ ತಾಯಿಯು ಗರ್ಭಕಂಠದ ಸಮಸ್ಯೆಯಿಂದ ಬಳಲುತ್ತಿದ್ದು, ಇದಾಗ್ಯೂ ಮಗ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಮಗನನ್ನು ಹೆತ್ತ ತಾಯಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.