ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನಾ ಮುಖ್ಯಸ್ಥ ಏಕನಾಥ ಶಿಂಧೆ ಇಂದು ರಾಜೀನಾಮೆ ನೀಡಿದ್ದಾರೆ. ಇದೆಲ್ಲದರ ನಡುವೆ ಮುಂದಿನ ಮಹಾರಾಷ್ಟ್ರ ಸಿಎಂ ಯಾರು ಎಂಬುದು ಇನ್ನೂ ಕೂಡ ಸಸ್ಪೆನ್ಸ್ನಲ್ಲಿಯೇ ಇದೆ.
ಇಂದು ಮುಂಜಾನೆ ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ ಏಕನಾಥ್ ಶಿಂಧೆ ತಮ್ಮ ರಾಜೀನಾಮೆಯನ್ನು ನೀಡುವ ಮೂಲಕ ಸಿಎಂ ಯಾರು ಎಂಬ ರಹಸ್ಯವನ್ನು ಇನ್ನೂ ಜಾರಿಯಲ್ಲಿಟ್ಟಿದ್ದಾರೆ.
ಹೊಸ ಸರ್ಕಾರ ರಚನೆಯಾಗುವವರೆಗೂ ಶಿಂಧೆ ಕೇರ್ಟೇಕರ್ ಚೀಫ್ ಮಿನಿಸ್ಟರ್ ಆಗಿಯೇ ಮುಂದುವರಿಯಲಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಪಡೆ 288 ಕ್ಷೇತ್ರಗಳಲ್ಲಿ 233 ಕ್ಷೇತ್ರಗಳನ್ನು ಗೆದ್ದು ಹೊಸ ಇತಿಹಾಸ ಬರೆದಿದೆ. ಆದ್ರೆ ಚುನಾವಣೆ ಶುರುವಾಗಿ ಫಲಿತಾಂಶ ಆಚೆ ಬಂದರೂ ಕೂಡ ಈ ಮೈತ್ರಿ ತನ್ನ ಸಿಎಂ ಅಭ್ಯರ್ಥಿ ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಈಗಲೂ ಕೂಡ ಅದೇ ಸಸ್ಪೆನ್ಸ್ ಮುಂದುವರಿದಿದೆ.
ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಬೆಹೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಹೀಗಾಗಿ ಇದರ ಹಿಂದೆ ದೇವೇಂದ್ರ ಫಡ್ನವೀಸ್ ಶ್ರಮ ದೊಡ್ಡದಿದ್ದು ಅವರೇ ಮತ್ತೆ ಮೂರನೇ ಬಾರಿ ಸಿಎಂ ಆಗಿ ಮುಂದುವರಿಯಲಿ ಎಂದು ಹೇಳಲಾಗುತ್ತಿದೆ. ಬಿಜೆಪಿ 288 ಸ್ಥಾನಗಳಲ್ಲಿ 132 ಸ್ಥಾನಗಳನ್ನು ಏಕಾಂಗಿಯಾಗಿ ಗೆದ್ದು ಮಹಾರಾಷ್ಟ್ರದಲ್ಲಿ ಇತಿಹಾಸ ನಿರ್ಮಿಸಿದೆ. ಇತ್ತ ಶಿಂಧೆಯ ಶಿವಸೇನಾ 57 ಸೀಟ್ ಹಾಗೂ ಎನ್ಸಿಪಿ 41 ಸೀಟ್ಗಳನ್ನು ಗೆದ್ದುಕೊಂಡು ಮೈತ್ರಿಪಡೆಯ ಸ್ಥಾನಗಳು 233ಕ್ಕೆ ತಲುಪಿದೆ.
ಶಿವಸೇನಾ ಸಂಸದ ಮಹೇಶ್ ಮ್ಹಸ್ಕೆ ರಾಜ್ಯದಲ್ಲಿ ಬಿಹಾರ ಮಾದರಿಯ ಸರ್ಕಾರ ಬರಬೇಕು ಎನ್ನುತ್ತಿದ್ದಾರೆ. ಅಲ್ಲಿ ಹೇಗೆ ಬಿಜೆಪಿ ನಿತೀಶ್ ಕುಮಾರ್ಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡಲಾಗಿದೆಯೋ, ಇಲ್ಲಿಯೂ ಕೂಡ ಹಾಗೆ ಸಿಎಂ ಸ್ಥಾನವನ್ನು ಏಕನಾಥ್ ಶಿಂಧೆಗೆ ಬಿಟ್ಟುಕೊಡಬೇಕು. ಅಲ್ಲಿಯೂ ಕೂಡ ನಿತೀಶ್ ಕುಮಾರ್ ಪಕ್ಷವೂ ಕೂಡ ಬಹುಮತವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.