ಬೆಳ್ಳಂ ಬೆಳಗ್ಗೆ ಪಿಎಫ್ ಐ ಜಿಲ್ಲಾಧ್ಯಕ್ಷನ ಮನೆ ಮೇಲೆ ದಾಳಿ: ಆರೋಪಿ ಬಂಧನ

ಹೊಸದಿಗಂತ ವರದಿ, ಮಂಡ್ಯ:
ರಾಷ್ಟ್ರೀಯ ತನಿಖೆ ಸಂಸ್ಥೆ ದೇಶಾದ್ಯಂತ ಪಿಎಫ್ಐ ಮತ್ತು ಎಸ್ ಡಿಪಿಐ ಸಂಘಟನೆಗಳ ಮುಖಂಡರು, ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ ಬಳಿಕ ಮಂಡ್ಯದಲ್ಲೂ ಪೊಲೀಸರು ಪಿಎಫ್ ಐ ಸಂಘಟನೆ ಜಿಲ್ಲಾಧ್ಯಕ್ಷನ ಮನೆ ಮೇಲೆ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿದ್ದಾರೆ.
ನಗರದ ಗುತ್ತಲು ಬಡಾವಣೆಯ ಸಪ್ದರಿಯಾ ನಗರದಲ್ಲಿ ವಾಸವಾಗಿರುವ ಇರ್ಫಾನ್ (34) ಎಂಬಾತ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, ಆತನನ್ನು ವಶಕ್ಕೆ ಪಡೆದರು.
ಎನ್ಐಎ ದೇಶಾದ್ಯಂತ ದಾಳಿ ನಡೆಸಿದ ವೇಳೆ ಅದನ್ನು ವಿರೋಧಿಸಿ ಇರ್ಫಾನ್ ಪಿಎಫ್ಐ ಕಾರ್ಯಕರ್ತರು ಮತ್ತು ಇತರರನ್ನು ಬಳಸಿಕೊಂಡು ಮಂಡ್ಯ ಮತ್ತು ಇತರೆ ಕಡೆಗಳಲ್ಲಿ ಗೊಂದಲ ಸೃಷ್ಟಿ ಮಾಡಲು ಹುನ್ನಾರ ನಡೆಸಿದ ಎನ್ನಲಾಗಿದೆ. ಈ ಬಗ್ಗೆ ಎಚ್ಚೆತ್ತ ಪೊಲೀಸರು ಆತನನ್ನು ಕರೆದು ತಿಳಿ ಹೇಳಿದ್ದರು. ಆದರೂ ಸಹ ನಗರದ ವಿವಿಧಡೆ ಸಭೆಗಳನ್ನು ನಡೆಸಿ ಗೊಂದಲ ಸೃಷ್ಟಿಸುವ ಹುನ್ನಾರ ಮಾಡಿದ್ದ.
ಇದರಿಂದ ಎಚ್ಚತ್ತ ಪೊಲೀಸರು ಇಂದು ಬೆಳಗ್ಗೆ 4 ಗಂಟೆ ವೇಳೆಗೆ ಆತನ ಮೇಲೆ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಆರೋಪಿ ಇರ್ಫಾನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಗುತ್ತಲು ಬಡಾವಣೆಯ ಪಿಎಫ್ಐ ಕಾರ್ಯಕರ್ತರು ನಗರದ ವಿನೋಬ ರಸ್ತೆ ಬಳಿ ಇರುವ ತಹಸೀಲ್ದಾರ್ ನಿವಾಸದ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಮನವೊಲಿಸುವ ಯತ್ನ ನಡೆಸಿದರಾದರೂ ಪೊಲೀಸರ ವಿರುದ್ಧವೇ ಘೋಷಣೆ ಕೂಗಿದ ಕಾರಣ ಪ್ರತಿಭಟನಾಕಾರರ ಪೈಕಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಅವರ ಸೂಚನೆ ಮೇರೆಗೆ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಪಿಎಸ್ಐ ರಮೇಶ್ ಅವರುಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು.
ಈ ಸಂಬಂಧ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!