Sunday, August 14, 2022

Latest Posts

ಜನಮನ ಸೆಳೆದ ಕಬೀರಾನಂದ ಶ್ರೀಗಳ ಪಲ್ಲಕ್ಕಿ , ಜಾನಪದ ಉತ್ಸವ

ಹೊಸ ದಿಗಂತ ವರದಿ, ಚಿತ್ರದುರ್ಗ:

ನಗರದ ಕಬೀರಾನಂದಾಶ್ರಮದ ವತಿಯಿಂದ ನಡೆಯುತ್ತಿರುವ ೯೧ನೇ ಶಿವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಮಧ್ಯಾಹ್ನ ಪಲ್ಲಕ್ಕಿ ಉತ್ಸವ ಹಾಗೂ ಜಾನಪದ ಉತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಕಬೀರಾನಂದಾಶ್ರಮದ ಮುಂಭಾಗದಲ್ಲಿ ನಗರಸಭೆ ಸದಸ್ಯ ಹಾಗೂ ೯೧ನೇ ಶಿವರಾತ್ರಿ ಮಹೋತ್ಸವದ ಅಧ್ಯಕ್ಷ ಬಿ.ವೆಂಕಟೇಶ್ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಪಲ್ಲಕ್ಕಿ ಮತ್ತು ಜನಪದ ಉತ್ಸವದಲ್ಲಿ ಕೀಲು ಕುದುರೆ, ಮಹಿಳಾ ತಮಟೆ, ಜಾಂಜ್ ನೃತ್ಯ, ಕಿನ್ನರಿ ಜೋಗಿ, ಲಂಬಾಣಿ ನೃತ್ಯ, ಖಾಸ ಬೇಡರ ಪಡೆ, ಡೂಳ್ಳು ಕುಣಿತ, ಕೋಲಾಟ, ಶ್ರೀ ಲಕ್ಷ್ಮೀ ಟ್ಯಾಂಜೋ, ಶಾರದ ಬ್ರಾಸ್ ಬ್ಯಾಂಡ್ ಸೇರಿದಂತೆ ವಿವಿಧ ರೀತಿಯ ಜನಪದ ಕಾಲ ಪ್ರಕಾರಗಳು ಭಾಗವಹಿಸಿದ್ದವು. ಇದರೊಂದಿಗೆ ಛತ್ರಿ ಚಾಮರಗಳು ಸಹಾ ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ನೀಡಿದವು.
ವಿವಿಧ ರೀತಿಯ ಹೂವುಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶಿವಲಿಂಗಾನಂದ ಸ್ವಾಮೀಜಿ ಕುಳಿತಿದ್ದರು. ಶ್ರೀಗಳು ತೆಲೆಗೆ ಖಾವಿಪೇಟ ಧರಿಸಿ, ಜರತಾರಿ ಶಾಲನ್ನು ಹೂದ್ದು ಪಲ್ಲಕ್ಕಿಯಲ್ಲಿ ಪವಡಿಸಿದ್ದರು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ನೆರೆದಿದ್ದ ಭಕ್ತಾಧಿಗಳಿಗೆ ದರ್ಶನ ಆರ್ಶಿವಾದ ನೀಡಿದರು.
ಜಾನಪದ ಮೆರವಣಿಗೆ ಸಾಗುವ ಮಾರ್ಗದಲ್ಲಿ ದಾರಿಯುದ್ದಕ್ಕೂ ಭಕ್ತಾದಿಗಳು ತಮ್ಮ ತಮ್ಮ ಮನೆಗಳ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸಿ, ಶ್ರದ್ಧಾಭಕ್ತಿಯಿಂದ ಸಾಲಿನಲ್ಲಿ ನಿಂತು ಶ್ರೀಗಳ ದರ್ಶನವನ್ನು ಪಡೆದು ಪುನೀತರಾದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರ ತಮಟೆ ಪ್ರದರ್ಶನ ನೆರದಿದ್ದ ಜನತೆಯನ್ನು ಆಕರ್ಷಿಸಿತು. ಲಂಬಾಣಿ ನೃತ್ಯ ನೋಡುಗರ ಗಮನ ಸೆಳೆಯಿತು.
ಮೆರವಣಿಗೆ ಆರಂಭದಲ್ಲಿ ಶ್ರೀಗಳು ಆಶ್ರಮದಲ್ಲಿನ ಸದ್ಗುರು ಸಿದ್ದಾರೂಢರ ಮೂರ್ತಿ ಹಾಗೂ ಕಾಳಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಮಂಗಳಾರತಿಯ ನಂತರ ಪಲ್ಲಕ್ಕಿ ಏರಿದರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಓಂಕಾರ್, ರೇಖಾ ಸೇರಿದಂತೆ ಅಪಾರ ಭಕ್ತಾದಿಗಳು ನೆರೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss