ಹೊಸದಿಗಂತ ವರದಿ ಕೊಪ್ಪಳ:
ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರು ಮಾಡಲಾದ 1 ಕೋಟಿ 78 ಲಕ್ಷ ರೂ ಅನುದಾನದಲ್ಲಿ ನಿರ್ಮಾಣಗೊಂಡ 27 ವಿಜ್ಞಾನ ಮಾದರಿಯ ಅತ್ಯಾಕರ್ಷಕ ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರವು ಮಾರ್ಚ್ 21ರಂದು ಲೋಕಾರ್ಪಣೆಯಾಯಿತು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಮಾರಂಭವನ್ನು ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ, ಸಂಸದರಾದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು.
ಈ ವೇಳೆ ಸಚಿವರು, ಸಂಸದರು, ಶಾಸಕರು ವಿಜ್ಞಾನ ಕೇಂದ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ಜಿಲ್ಲೆಯ ಎಲ್ಲ ಶಾಲಾ ಮಕ್ಕಳು ಆಗಾಗ ಇಲ್ಲಿಗೆ ಬಂದು ಹೊರ ಸಂಚಾರದ ಮೂಲಕ ಸಂದರ್ಶನ ಮಾಡಿ ವಿಷಯ ತಿಳಿದುಕೊಳ್ಳಬಹುದಾಗಿದೆ. ಇಲ್ಲಿ ಎಲ್ಲಾ ಕಾರ್ಯನಿರತ ಪ್ರದರ್ಶಿಕೆಗಳು ಇದ್ದು ಮಕ್ಕಳಿಗೆ ಕುತೂಹಲಕಾರಿಯಾಗಿವೆ ಎಂದು ತಿಳಿಸಿದರು