ಆಕೆಗೂ ಎಲ್ಲಾ ಹೊಸತು. ಗಂಡನ ಮನೆಯಲ್ಲಿ ಅಡ್ಜಸ್ಟ್ ಆಗೋಕೆ ಕಷ್ಟ ಆಗುತ್ತಿತ್ತು. ಸೀರಿಯಲ್ಗಳಲ್ಲಿ ಬರೋ ಅತ್ತೆ ಥರವೇ ಅವರತ್ತೆ ಇದ್ದರು.
ಮದುವೆಯಾಗಿ ಎರಡು ತಿಂಗಳಲ್ಲೇ ಅತ್ತೆ ಸೊಸೆ ಜಗಳದಿಂದ ಎಲ್ಲರೂ ಬೇಸತ್ತರು.
ಗಂಡನೂ ಅಮ್ಮನ ಪರ ಮಾತನಾಡಿದ್ದನ್ನು ನೋಡಿ ಅವಳಿಗೆ ಕೋಪ ಬಂದು ಮನೆ ಬಿಟ್ಟು ತವರು ಸೇರಿದ್ಲು.
ಅಪ್ಪನ ಬಳಿ ನನಗೆ ಅತ್ತೆಯಿಂದ ದೂರಾದರೆ ಸಾಕು ವಿಷ ಹಾಕಿ ಕೊಲ್ಲೋದಕ್ಕೂ ಹೇಸೋದಿಲ್ಲ ನಾನು ಎಂದು ಹೇಳಿದಳು. ಸಿಟ್ಟಿನಲ್ಲಿ ಮಾತನಾಡಿದ್ದು ಎಂದು ಎಲ್ಲರೂ ಸುಮ್ಮನಾದರು. ಮರುದಿನ ತನ್ನ ಪ್ಲಾನ್ ಹೇಳಿದಳು.
ದಿನವೂ ಅತ್ತೆ ಊಟದಲ್ಲಿ ಸ್ವಲ್ಪವೇ ವಿಷ ಬೆರೆಸ್ತೇನೆ. ಅವರ ಜೊತೆ ಇವತ್ತಿಂದಲೇ ಪ್ರೀತಿಯಿಂದ ಇರ್ತೇನೆ. ಆಗ ಯಾರಿಗೂ ಅನುಮಾನ ಬರೋದಿಲ್ಲ. ಎರಡು ತಿಂಗಳಲ್ಲಿ ಅತ್ತೆ ಕಥೆ ಮುಗಿಯತ್ತೆ ಎಂದಳು.
ಅವಳಪ್ಪನದ್ದೇ ಮೆಡಿಕಲ್ ಸ್ಟೋರ್ ಇತ್ತು ಅವನೇ ಅವಳಿಗೆ ವಿಷದ ಪುಡಿ ತಂದುಕೊಟ್ಟ.
ಅತ್ತೆ ಮನೆಗೆ ತೆರಳಿ ಇನ್ನು ಸರಿಯಾಗಿ ಇರುತ್ತೇನೆ ಅಪ್ಪ ಅಮ್ಮ ಬುದ್ಧಿ ಹೇಳಿ ಕಳಿಸಿದ್ದಾರೆ ಎಂದು ನಾಟಕ ಮಾಡಿದ್ಲು. ದಿನವೂ ಅತ್ತೆ ಕಾಲು ಒತ್ತೋದು, ಚಂದದ ಅಡುಗೆ ಮಾಡೋದು ಹೀಗೆ ಅವರತ್ತೆಯನ್ನು ತುಂಬಾ ಚೆನ್ನಾಗಿ ನೋಡಿಕೊಂಡಳು. ಅತ್ತೆ ಸೊಸೆ ಅಮ್ಮ ಮಗಳಿಗಿಂತ ಹೆಚ್ಚಾಗಿ ಪ್ರೀತಿ ಮಾಡೋಕು ಶುರು ಮಾಡಿದ್ರು.
ಇದೀಗ ಸೊಸೆಗೆ ತನ್ನ ತಪ್ಪಿನ ಅರಿವಾಯ್ತು. ದೇವರಂತ ಅತ್ತೆಯನ್ನು ಕೈಯಾರೆ ಕೊಲ್ಲುತ್ತಿದ್ದೇನೆ. ಇವರನ್ನು ಬಿಟ್ಟು ಹೇಗಿರೋದು ಎಂದು ಖಿನ್ನತೆಗೆ ಜಾರುವಷ್ಟು ನೋವು ಅನುಭವಿಸಿದ್ಲು. ಇದನ್ನು ನೋಡಲಾರದ ತಂದೆ ಹೇಳೇ ಬಿಟ್ಟ. ಇಷ್ಟು ದಿನ ನೀನು ಅತ್ತೆಗೆ ತಿನಿಸಿದ್ದು, ವಿಷ ಅಲ್ಲ ಪ್ರೋಟೀನ್ ಪೌಡರ್ ಹೀಗಾಗುತ್ತದೆ ಎಂದು ನನಗೆ ಮುಂಚೆಯೇ ಗೊತ್ತಿತ್ತು ಎಂದರು. ಅಪ್ಪನನ್ನು ತಬ್ಬಿ ಜೋರಾಗಿ ಅತ್ತಳು.
ಯಾವುದೇ ಹೊಸ ಸಂಬಂಧಕ್ಕೆ ಹೊಂದುವುದು ಸುಲಭ ಅಲ್ಲ. ಅಲ್ಲಿ ಜಗಳ, ಮನಸ್ತಾಪ ಮಾಮೂಲಿ. ವರ್ಷಗಳ ಗಟ್ಟಲೆ ಇಬ್ಬರೂ ಬೇರೆ ರೀತಿ ಜೀವನ ಮಾಡಿ ಬಂದವರು ಇದೀಗ ಒಂದೇ ಜೀವನ ಶೇರ್ ಮಾಡಬೇಕೆಂದರೆ ಕಷ್ಟ ಆಗೋದು ಸಹಜ. ಆದರೆ ಎಲ್ಲದಕ್ಕೂ ಸಮಯ ನೀಡಿ. ಸಮಯವೇ ಎಲ್ಲವನ್ನೂ ಸರಿ ಮಾಡುತ್ತದೆ.