ಭಾರತದಲ್ಲಾದ್ರೆ ಕಳಪೆ, ವಿದೇಶದಲ್ಲಾದ್ರೆ ಅದ್ಭುತ.. ಎರಡೇ ದಿನಕ್ಕೆ ಪಂದ್ಯ ಮುಗಿದ ಬ್ರಿಸ್ಬೇನ್‌ ಪಿಚ್‌ ಬಗ್ಗೆ ಕಿಡಿಕಾರಿದ ಸೆಹ್ವಾಗ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬ್ರಿಸ್ಬೇನ್‌ನಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡಿದೆ. ಆಸ್ಟ್ರೇಲಿಯಾ 6 ವಿಕೆಟ್‌ಗಳ ಜಯ ತನ್ನದಾಗಿಸಿಕೊಂಡಿದೆ. ಚೆಂಡಿಗೆ ದೊಡ್ಡ ಮಟ್ಟದ ಬೌನ್ಸ್ ಮತ್ತು ಚಲನೆ ಸಿಗುತ್ತಿದ್ದ ಹಸಿರು ಪಿಚ್‌ನಲ್ಲಿ ಬ್ಯಾಟಿಂಗ್‌ ನಡೆಸಲು ಬ್ಯಾಟ್ಸ್‌ ಮನ್‌ ಗಳು ಸಾಕಷ್ಟು ಪ್ರಾಯಾಸ ಪಟ್ಟಿದ್ದಾರೆ. ಕೇವಲ ಎರಡು ದಿನಗಳಲ್ಲಿ 34 ವಿಕೆಟ್‌ಗಳು ಬಿದ್ದಿವೆ. ಪಿಚ್‌ ವರ್ತನೆಯಿಂದ ಗಾಬರಿಯಾದ ಆಫ್ರಿಕಾ ನಾಯಕ ಎಲ್ಗರ್ ಅಂಪೈರ್‌ ಗಳ ಬಳಿ ಹೋಗಿ ಪಿಚ್‌ ಆಡಲು ಸುರಕ್ಷಿತವಾಗಿದೆಯೆ ಎಂದು ಕೇಳಿದ ಘಟನೆಯೂ ನಡೆದಿತ್ತು. ಕೇವಲ ಆಸಿಸ್‌ ಗೆಲುವನ್ನಷ್ಟೇ ಗಮನದಲ್ಲಿಸಿಕೊಂಡು ಇಂತಹದ್ದೊಂದು ಪಿಚ್‌ ತಯಾರಿಸಿದ ಆಸ್ಟೇಲಿಯಾ ಕ್ರಿಕೆಟ್‌ ಮಂಡಳಿ ವಿರುದ್ಧ ಕ್ರಿಕೆಟ್‌ ಜಗತ್ತು ಟೀಕಾಪ್ರಹಾರ ನಡೆಸುತ್ತಿದೆ. ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್‌ ಸಹ ಆಸಿಸ್‌ ಕ್ರಿಕೆಟ್‌ ಸಂಸ್ಥೆ ವಿರುದ್ಧ ಕಟು ಟೀಕಾಪ್ರಹಾರ ನಡೆಸಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳು ಭಾರತಕ್ಕೆ ಪ್ರವಾಸಬಂದು ಇಲ್ಲಿನ ಮೊನಚು ಸ್ಪಿನ್‌ ದಾಳಿ ಎದುರಿಸಲಾಗದೆ ತಿಣಕಾಡಿ ಸೋತಾಗಲೆಲ್ಲಾ ಅಲ್ಲಿನ ಕ್ರಿಕೆಟ್‌ ಮಂಡಳಿಗಳು ಹಾಗೂ ಅಭಿಮಾನಿಗಳು ಕಳಪೆ ಪಿಚ್‌ ಎಂದು ಬ್ರಾಂಡ್‌ ಮಾಡುವುದು ಮಾಮೂಲಾಗಿದೆ. ಆದರೆ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಸೂಕ್ತವಿಲ್ಲದ ಗಬ್ಬಾ ಪಿಚ್‌ ಅನ್ನು ಅದ್ಭುತ, ಬ್ಯೂಟಿ ಆಫ್‌ ಟೆಸ್ಟ್‌ ಕ್ರಿಕೆಟ್‌, ಅಮೋಘ ಗೆಲುವು, ವೇಗಿಗಳ ಮರೆದಾಟ ಎಂದೆಲ್ಲಾ ಹಾಡಿ ಹೊಗಳಲಾಗುತ್ತಿದೆ. ಇದು ಸೆಹ್ವಾಗ್‌ ರನ್ನು ಕೆರಳಿಸಿದೆ.
“ಐದು ದಿನದ ಪಂದ್ಯದಲ್ಲಿ ಕೇವಲ 142 ಓವರ್‌ಗಳನ್ನು ಸಹ ಆಡಲು ಆಟಗಾರರಿಗೆ ಸಾಧ್ಯವಾಗಲಿಲ್ಲ. ಆ ದೇಶಗಳಲ್ಲಿ ಇವೆಲ್ಲಾ ನಡೆದರೆ ಯಾರೂ ಕೂಡಾ ಕಳಪೆ ಪಿಚ್‌ ಎಂದು ಬೊಬ್ಬೆ ಹಾಕುವುದಿಲ್ಲ. ಐಸಿಸಿ ಸಹ ಮಾತನಾಡಲು ಧೈರ್ಯಮಾಡುವುದಿಲ್ಲ. ಇದು ಭಾರತದಲ್ಲಿ ಸಂಭವಿಸಿದ್ದರೆ, ಇದು ಟೆಸ್ಟ್ ಕ್ರಿಕೆಟ್‌ನ ಅಂತ್ಯ, ಭಾರತ ಟೆಸ್ಟ್ ಕ್ರಿಕೆಟ್ ಅನ್ನು ಹಾಳು ಮಾಡುತ್ತದೆ ಅಲ್ಲಿನ ಕ್ರಿಕೆಟ್‌ ಪಂಡಿತರೆಲ್ಲ ಮುಗಿಬೀಳುತ್ತಿದ್ದರು. ಇಂತಹ ಕೆಟ್ಟ ಪಿಚ್‌ ತಯಾರಿಸುವ ಅವರು ನಾವು ಎಂತಹ ಪಿಚ್‌ಗಳನ್ನು ತಯಾರಿಸಬೇಕು ಎಂಬುದರ ಕುರಿತು ಉಪನ್ಯಾಸ ನೀಡಲು ಬರುತ್ತಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯದ್ದು ಬರೀ ಬೂಟಾಟಿಕೆ” ಎಂದು ಸೆಹ್ವಾಗ್‌ ವಾಗ್ದಾಳಿ ನಡೆಸಿದ್ದಾರೆ.
ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ನಾಯಕ ಈನ್ ಎಲ್ಗರ್ ಸಹ ಗಬ್ಬಾದಲ್ಲಿ ಪಿಚ್‌ ಅನ್ನು ಟೀಕಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಪ್ರಪಂಚದಾದ್ಯಂತ ಜನಪ್ರಿಯತೆಗಾಗಿ ಹೆಣಗಾಡುತ್ತಿದೆ, ಇಂತಹದ್ದರಲ್ಲಿ ಇಲ್ಲಿ ಸಿದ್ಧಪಡಿಸಿದಂತಹ ಪಿಚ್‌ಗಳು ಟೆಸ್ಟ್‌ ಕ್ರಿಕೆಟ್‌ ಬೆಳೆಯಲು ಸಹಾಯ ಮಾಡುವುದಿಲ್ಲ ಎಂದು ಅವರು ವಾದಿಸಿದ್ದಾರೆ. “ಈ ಸ್ವರೂಪಕ್ಕೆ ಇದು ಉತ್ತಮ ಪಿಚ್ ಎಂಬುದನ್ನು ನೀವಷ್ಟೇ ಹೇಳಿಕೊಳ್ಳಬೇಕು” ಎಂದು ಎಲ್ಗರ್ ಹೇಳಿದ್ದಾರೆ.
ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್‌ ಸಹ ಪಿಚ್‌ ಅಷ್ಟೇನೂ ಉತ್ತಮವಿರಲಿಲ್ಲ ಎಂಬುದನ್ನು ಒಪಿಕೊಂಡಿದ್ದಾರೆ. ಆದರೆ, ಅದು ಎರಡೂ ಕಡೆ ಒಂದೇ ಆಗಿತ್ತು ಎಂಬ ವಿಚಾರವನ್ನು ಒತ್ತಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!