ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………
ಹೊಸ ದಿಗಂತ ವರದಿ, ಚಿತ್ರದುರ್ಗ:
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವಿಚ್ಚಿನ್ನ ಮಠಕ್ಕೂ, ಕೂಡಲಿ ಶೃಂಗೇರಿ ಮಠಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಜೋಗಿಮಟ್ಟಿ ರಸ್ತೆಯ ಶ್ರೀ ಕೂಡಲೀ ಶೃಂಗೇರಿ ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನಂನ ಶಾಖಾ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಚ್ಚಿನ್ನ ಮಠದವತಿಯಿಂದ ಕೂಡಲಿ ಶೃಂಗೇರಿ ಮಠಕ್ಕೆ ಹೊಸ ಪೀಠಾಧಿಪತಿಗಳನ್ನು ನೇಮಕ ಮಾಡುತ್ತಿದ್ದೇವೆಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಭಕ್ತರಲ್ಲಿ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ ಎಂದರು.
ಆದರೆ ಕೂಡಲಿ ಶೃಂಗೇರಿ ಮಠಕ್ಕೂ ಅವಿಚ್ಛಿನ್ನ ಮಠಕ್ಕೂ ಯಾವುದೇ ಸಂಬಂಧ ಇಲ್ಲ. ಅವಿಚ್ಛಿನ್ನ ಮಠಕ್ಕೆ ಕೂಡಲಿ ಶೃಂಗೇರಿ ಮಠದ ಹೆಸರನ್ನು ಬಳಸಬಾರದೆಂದು ಕೆಲವು ವರ್ಷಗಳ ಹಿಂದೆ ನ್ಯಾಯಾಲಯವು ಆದೇಶ ನೀಡಿದೆ. ಆದರೂ ಕೂಡ ಅವಿಚ್ಛಿನ್ನ ಮಠದವರು ಸಾಕಷ್ಟು ಬಾರಿ ಕೂಡಲಿ ಶೃಂಗೇರಿ ಮಠದ ಹೆಸರನ್ನು ಬಳಕೆ ಮಾಡಿಕೊಂಡು ಭಕ್ತಾದಿಗಳಲ್ಲಿ ಗೊಂದಲವನ್ನು ಸೃಷ್ಟಿ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿದರು.
ಈ ಹಿಂದೆ ಅವಿಚ್ಛಿನ್ನ ಮಠದ ಪೀಠಾಧಿಪತಿಗಳಿಗೆ ಅನಾರೋಗ್ಯವಿದ್ದಾಗ, ಕೂಡಲಿ ಶೃಂಗೇರಿ ಮಠದ ಪೀಠಾಧಿಪತಿಗಳಿಗೆ ಅನಾರೋಗ್ಯವಿದೆ ಎಂದು ಧನಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ಅವಿಚ್ಛಿನ್ನ ಮಠದ ಶ್ರೀಗಳು ಮುಕ್ತರಾದಾಗ, ಕೂಡಲಿ ಶೃಂಗೇರಿ ಮಠದ ಪೀಠಾಧಿಪತಿಗಳು ಮುಕ್ತರಾಗಿದ್ದರೆಂದು ಹೇಳಿಕೆ ನೀಡಿದ್ದರು. ಅಲ್ಲದೆ ಇದೀಗ ಕೂಡಲಿ ಶೃಂಗೇರಿ ಮಠಕ್ಕೆ ನೂತನ ಪೀಠಾಧಿಪತಿಗಳು ನೇಮಕ ಎಂದು ಹೇಳಿಕೆ ನೀಡಿದ್ದಾರೆ. ಇದು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಭಕ್ತಾಧಿಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದರು.
ಇಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ಯಾರು ಕೂಡ ಗಮನ ಕೊಡಬಾರದು. ಅವಿಚ್ಛಿನ್ನ ಮಠಕ್ಕೂ ಕೂಡಲಿ ಶೃಂಗೇರಿ ಮಠಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿರುವ ಶ್ರೀಗಳು, ನಮಗೆ ಶ್ರೀ ಶಾರದಾ ದೇವಿಯ ಪ್ರೇರಣೆಯಾದಾಗ ನಮ್ಮ ಕೂಡಲೀ ಶೃಂಗೇರಿ ಮಹಾಸಂಸ್ಥಾನಕ್ಕೆ ನಮ್ಮ ಉತ್ತರಾಧಿಕಾರಿಯನ್ನು ನಾವು ನೇಮಕ ಮಾಡುತ್ತೇವೆ ಎಂದು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಮಠದ ಆಪ್ತ ಕಾರ್ಯದರ್ಶಿಗಳಾದ ಹೆಚ್.ಎನ್.ಕೇಶ್ವ ಪ್ರಸಾದ್, ಭಾಸ್ಕರ್ , ಮಂಜು ಹಾಜರಿದ್ದರು.