ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಭವ್ಯ ರಾಮಮಂದಿರ ತಲೆಎತ್ತುತ್ತಿರುವ ಅಯೋಧ್ಯೆಯನ್ನು ಮಾದರಿ ನಗರವಾಗಿಸುವ ಹಲವು ಯೋಜನೆಗಳು ಅದಾಗಲೇ ಜಾರಿಯಲ್ಲಿವೆ. ಆ ಪೈಕಿ ಅಯೋಧ್ಯವನ್ನು ಸೌರಶಕ್ತಿಯನ್ನೇ ಪ್ರಮುಖವಾಗಿ ಅವಲಂಬಿಸಿ ಮುನ್ನಡೆಯುವ ನಗರವಾಗಿ ರೂಪಿಸುವುದೂ ಸೇರಿದೆ.
ಈ ಬಗ್ಗೆ ಹಿಂದುಸ್ತಾನ್ ಟೈಮ್ಸ್ ಪತ್ರಿಕೆ ವಿಸ್ತಾರ ವರದಿಯನ್ನು ಮಾಡಿದೆ. ವರದಿ ಹೇಳುವಂತೆ, ಎಲ್&ಟಿ ಕಂಪನಿಯು ತನ್ನ ವಿಸ್ತೃತ ಯೋಜನಾ ವರದಿಯಲ್ಲಿ ನಗರದ ಮನೆಗಳು, ಸರ್ಕಾರಿ ಕಟ್ಟಡಗಳು, ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಗಳ ಛಾವಣಿ ಮೇಲೆ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸುವುದಕ್ಕೆ ಒತ್ತು ನೀಡಿದೆ. ಈ ಬಗ್ಗೆ ಉತ್ತರ ಪ್ರದೇಶದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ(NEDA) ಸಂಸ್ಥೆಯ ನಿರ್ದೇಶಕಿ ಭವಾನಿ ಸಿಂಗ್ ಖಂಗಾರೋಟ್ ಮಾತನಾಡಿದ್ದಾರೆ.
ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗುವುದು. ತದನಂತರ ಬೇರೆ ನಗರಗಳಲ್ಲಿಯೂ ಈ ಬದಲಾವಣೆ ಸಾಧ್ಯವೇ ಎಂದು ಪರೀಕ್ಷಿಸಬೇಕಿದೆ ಎಂದಿದ್ದಾರೆ.
ಎಲ್&ಟಿ ಸರ್ವೆ ಅನ್ವಯ ಅಯೋಧ್ಯೆಯ 340,೦೦೦ ಜನಸಂಖ್ಯೆಯು 81,೦೦೦ ಮನೆಗಳಲ್ಲಿ ವಾಸಿಸುತ್ತಿದ್ದು, ವಾರ್ಷಿಕವಾಗಿ 281 ಮಿಲಿಯನ್ ಯುನಿಟ್ ಪವರ್ ಬಳಕೆ ಮಾಡುತ್ತಿದೆ.
ನೆಲದ ಮೇಲೆ ಕಂಬಗಳನ್ನು ನಿಲ್ಲಿಸಿ ಅದರ ತುದಿಯಲ್ಲಿ ಸೌರ ಫಲಕಗಳ ಅಳವಡಿಕೆ, ದೊಡ್ಡ ಸೋಲಾರ್ ಘಟಕಗಳು, ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಸಮುದಾಯ ಅಡುಗೆ ಮನೆಗಳಲ್ಲಿ ಸೌರ ಒಲೆ ಅಳವಡಿಕೆ, ಶ್ರೀರಾಮ ದೇವಾಲಯದ ಆವರಣವನ್ನು ಸಂಪೂರ್ಣ ಸೌರಶಕ್ತಿಮಯವಾಗಿಸುವುದು ಹೀಗೆ ಹಲವು ಆಯಾಮಗಳಲ್ಲಿ ಯೋಚಿಸಲಾಗುತ್ತಿದೆ.
ಇಷ್ಟೇ ಅಲ್ಲದೆ NEDA ರಾಜ್ಯದ ಸೌರ ನೀತಿಯಲ್ಲಿ ಬದಲಾವಣೆ ಮಾಡಿ ಆ ಮೂಲಕ ಮನೆಗಳು, ಕಚೇರಿಗಳು, ವಾಣಿಜ್ಯ ಮಳಿಗೆಗಳ ಮೇಲೆ ಸೋಲಾರ್ ಪ್ಯಾನೆಲ್ಸ್ ಸ್ಥಾಪನೆಗೆ ಹೆಚ್ಚಿನ ಆರ್ಥಿಕ ಉತ್ತೇಜನ ನೀಡುವಂತೆ ಪ್ರಸ್ತಾಪ ನೀಡಿದೆ. ಜೊತೆಗೆ ಭವಿಷ್ಯದ ಸೌರ ನಗರಗಳೆಂದು ಗುರುತಿಸಲಾದ ನಗರಗಳಲ್ಲಿ ಮೇಲ್ಛಾವಣಿ ಸೋಲಾರ್ ಪ್ಯಾನಲ್ಗಳ ಸ್ಥಾಪನೆಗೆ ರಾಜ್ಯ ಸಬ್ಸಿಡಿ ಹೆಚ್ಚಿಸುವಂತೆ NEDA ಕೋರಿದೆ.