Wednesday, August 17, 2022

Latest Posts

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ: ಗರ್ಭಗುಡಿ ಅಡಿಪಾಯ ತುಂಬುವ ಕೆಲಸಕ್ಕೆ ಚಾಲನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಉಡುಪಿ:

ಅಯೋಧ್ಯಾ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಪ್ರಕ್ರಿಯೆಯು ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಸೋಮವಾರ ಜನ್ಮಭೂಮಿಯಲ್ಲಿ ಕೂರ್ಮ ಶಿಲೆಯನ್ನು ಪೂಜಿಸಿ, ಅಡಿಪಾಯದಲ್ಲಿ ಗರ್ಭಗೃಹ ಬರುವ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.
ಕಳೆದ ವರ್ಷ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮಭೂಮಿಗೆ ಭೇಟಿ ನೀಡಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಈ ಸಂದರ್ಭದಲ್ಲಿ ಬೆಳ್ಳಿಯ ವಸ್ತುಗಳನ್ನೂ ಒಂದು ಕಲಶದಲ್ಲಿರಿಸಿ ಪೂಜಿಸಿ, ಅವುಗಳ ಸಹಿತ 9 ಶಿಲೆಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಂತರ ಅಡಿಪಾಯ ಅಗೆಯುವಾಗ ಅವುಗಳನ್ನು ತೆಗೆಯಲಾಗಿತ್ತು. ಇದೀಗ ಅಡಿಪಾಯ ತುಂಬುವ ಕಾಮಗಾರಿ ಪ್ರಗತಿಯಲ್ಲಿದ್ದು, ಸೋಮವಾರ ಸುಮುಹೂರ್ತದಲ್ಲಿ ಗರ್ಭಗುಡಿಯ ಅಡಿಪಾಯ ತುಂಬುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಸಮುದ್ರ ಮಟ್ಟದಿಂದ 91 ಮೀಟರ್ ಎತ್ತರದಲ್ಲಿ ಅಂದು ಪ್ರಧಾನಿ ಪೂಜೆ ಮಾಡಿದ ಶಿಲೆ ಮತ್ತು ಕಲಶವನ್ನು, ಅವರು ಪೂಜಿಸಿದ ಸ್ಥಳದಲ್ಲಿಯೇ ನೆಲದಿಂದ 14 ಮೀಟರ್ ಕೆಳಗೆ ಗರ್ಭ ಗೃಹದ ಸ್ಥಳದಲ್ಲಿ ಶಾಸ್ತ್ರೀಯ ವಿಧಾನದಿಂದ ನಾಲ್ಕು ಮೂಲೆಗಳಲ್ಲಿ 9 ಕಲ್ಲುಗಳನ್ನು ಅಳವಡಿಸಲಾಗಿದೆ. ಅವುಗಳ ಜೊತೆಗೆ ವಾಸ್ತುಶಿಲ್ಪದ ಪ್ರಕಾರ ವಿವಿಧ ಆಯುಧಗಳ ಚಿತ್ರವಿರುವ ಇತರ ಶಿಲೆಗಳನ್ನೂ ವಾಸ್ತುಶಿಲ್ಪದ ಮೂಲಕ ಇರಿಸಲಾಗಿದೆ. ಇದರೊಂದಿಗೆ ಗರ್ಭಗೃಹದ ಅಡಿಪಾಯವನ್ನು ತುಂಬುವ ಕೆಲಸ ಪ್ರಾರಂಭವಾಗಿದೆ.
ಬೆಳಗ್ಗೆ 7 ಗಂಟೆಗೆ ಗರ್ಭಗೃಹದ ಅಡಿಪಾಯದ ಪೂಜೆ ಪ್ರಾರಂಭವಾಯಿತು. ಈ ವೇಳೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ವಿಶ್ವಸ್ಥರಾದ ಡಾ. ಅನಿಲ್ ಮಿಶ್ರಾ, ಅಯೋಧ್ಯಾ ಜಿಲ್ಲಾಧಿಕಾರಿ ಡಾ. ಅನೂಜ್ ಝಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಕಟಪೂರ್ವ ಸರಕಾರ್ಯವಾಹ ಸುರೇಶ್ ಜೋಶಿ (ಭಯ್ಯಾಜಿ), ರಾಮಮಂದಿರ ನಿರ್ಮಾಣ ಉಸ್ತುವಾರಿ ತಂಡದ ಸದಸ್ಯ ಗೋಪಾಲ್ ಎಂ. ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!