ಆಯುಷ್ಮಾನ್ ಭಾರತ್ ಯೋಜನೆಯಡಿ ಸ್ಕ್ರೀನಿಂಗ್: ಚಿಕ್ಕಮಗಳೂರು ದೇಶದಲ್ಲೇ ನಂಬರ್ ಎಂದ ಜಿಲ್ಲಾಧಿಕಾರಿ

ಹೊಸದಿಗಂತ ವರದಿ,ಚಿಕ್ಕಮಗಳೂರು:

ಆಯುಷ್ಮಾನ್ ಭಾರತ್ ಯೋಜನೆಯಡಿ ೧೧.೩೭ ಲಕ್ಷ ಜನರ ಸಮೀಕ್ಷೆ ನಡೆಸಿ ವಿವಿಧ ಖಾಯಿಲೆಯಿಂದ ಬಳಲುತ್ತಿರುವರ ಸ್ಕ್ರೀನಿಂಗ್ ಮಾಡಲಾಗಿದ್ದು, ಜಿಲ್ಲೆ ದೇಶದಲ್ಲೇ ನಂಬರ್ ಒನ್ ಆಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಇನ್ನಿತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಸಮೀಕ್ಷೆ ಮಾಡಲಾಗಿದ್ದು, ೧೧.೩೭ ಲಕ್ಷ ಜನಸಂಖ್ಯೆಯನ್ನು ಸರ್ವೇ ಮಾಡಿ ಸ್ಕ್ರೀನ್ ಮಾಡಲಾಗಿದೆ. ಇದು ಕರ್ನಾಟಕದಲ್ಲಿ ನಂಬರ್ ಒನ್ ಆಗಿದ್ದು, ಇದು ಬಹುಷಃ ಭಾರತದಲ್ಲೂ ನಂ.೧ ಎಂದು ನನಗನ್ನಿಸುತ್ತದೆ ಎಂದರು.
ಯಾವ ರಾಜ್ಯದ ಯಾವ ಜಿಲ್ಲೆಯಲ್ಲೂ ಇದು ಇನ್ನೂ ಆಗಿಲ್ಲ. ಇದು ನಮ್ಮ ಸಾಧನೆಯಾಗಿದೆ. ಇದನ್ನು ಸಿಎಂ ಗಮನಕ್ಕೂ ತಂದಿದ್ದೇವೆ ಎಂದರು.
ಈ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೆ ಕೋವಿಡ್ ಸಂದರ್ಭದಲ್ಲೂ ಹೆಚ್ಚು ಸಾವು ಸಂಭವಿಸುತ್ತದೆ. ಅದನ್ನು ನಿಯಂತ್ರಣದಲ್ಲಿಟ್ಟರೆ ಸಾವಿನ ಪ್ರಮಾಣವನ್ನೂ ನಿಯಂತ್ರಿಸಬಹುದು. ಆದರೆ ಈ ರೀತಿ ಖಾಯಿಲೆ ಇರುವವಲ್ಲಿ ಶೇ.೫೪ ಜನರಿಗೆ ತಮಗೆ ಈ ಖಾಯಿಲೆ ಇದೆ ಎನ್ನುವುದೇ ಗೊತ್ತಿರುವುದಿಲ್ಲ. ಖಾಯಿಲೆ ಇದೆ ಎಂದು ಗೊತ್ತಿರುವವರ ಪೈಕಿ ಶೇ.೩೪ ಮಂದಿ ಮಾತ್ರ ಔಷಧಿ ತೆಗೆದುಕೊಳ್ಳುತ್ತಾರೆ. ಇನ್ನುಳಿದವರು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗುತ್ತಿದೆ ಎಂದರು.
ಈಗ ಸರ್ವೇ ಮಾಡಿ ಇಂತಹ ಆರೋಗ್ಯ ಸಮಸ್ಯೆ ಇರುವವರನ್ನು ಪತ್ತೆ ಹಚ್ಚಿ ಸ್ಕ್ರೀನಿಂಗ್ ಮಾಡಿರುವುದರಿಂದ ಸರಿಯಾದ ಸಮಯಕ್ಕೆ ಔಷದೋಪಚಾರ ಮಾಡುವುದರಿಂದ ಸಾವಿನ ಸಂಖ್ಯೆ ಕಡಿಮೆ ಆಗುತ್ತದೆ. ಈ ವಿಚಾರದಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಇದರಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂಧಿ ಭಾಗಿಯಾಗಿದ್ದು ಅವರನ್ನು ಅಭಿನಂದಿಸುತ್ತೇವೆ ಎಂದು ತಿಳಿಸಿದರು.
ನಮ್ಮಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಸಾಕಷ್ಟು ಆರೋಗ್ಯ ಸೌಲಭ್ಯಗಳಿಲ್ಲದಿದ್ದರೂ ಕೋವಿಡ್ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆಕ್ಸಿಜನ್ ಇಲ್ಲದ ಕಾರಣಕ್ಕೆ ನಮ್ಮಲ್ಲಿ ಒಂದೂ ಸಾವು ಸಂಭವಿಸಿಲ್ಲ ಎಂದರು.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ನಮ್ಮಲ್ಲಿವೆ. ೧೮೨೫ ಅಂಗನವಾಡಿ ಕೇಂದ್ರಗಳು ನಮ್ಮಲ್ಲಿವೆ. ೧೫೮೪ ಕೇಂದ್ರಗಳಿಗೆ ಸಂಪೂರ್ಣ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಸ್ವಂತ ಕಟ್ಟಡಗಳನ್ನೂ ನಿರ್ಮಿಸಲಾಗಿದೆ. ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳನ್ನು ಶೂನ್ಯ ಹಾಜರಾತಿ ಇರುವ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲಾಗುವುದು ಎಂದರು.
ನಮ್ಮ ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ೧೭೧ ಮಕ್ಕಳನ್ನು ಗುರುತಿಸಲಾಗಿದ್ದು, ಅವಕ್ಕೆ ಪೋಷಕ ಪುನರ್ವಸತಿ ಕೇಂದ್ರಗಳಲ್ಲಿಟ್ಟು ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಈಗ ಅವುಗಳ ಪೌಷ್ಠಿಕತೆ ಹೆಚ್ಚುತ್ತಿದೆ ಇಂತಹ ಮಕ್ಕಳನ್ನು ಗ್ರಾಮಪಂಚಾಯ್ತಿಗಳಿಂದ ದತ್ತು ಪಡೆದು ಮೊಟ್ಟೆ ಇನ್ನಿತರೆ ಪೌಷ್ಠಿಕ ಆಹಾರವನ್ನು ಕೊಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯವಿವಾಹ ನಡೆದ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಿಶೇಷವಾಗಿ ಜನರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ೧೫ ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದೆ ೬೩ ಪ್ರಕರಣಗಳನ್ನು ಇಲಾಖೆ ವತಿಯಿಂದ ತಡೆಯಲಾಗಿದೆ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಸ್ವಲ್ಪ ಹೆಚ್ಚು ದಾಖಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!