ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣದಲ್ಲಿ ಲೋಕಾಯುಕ್ತ ಕೊಟ್ಟ ಬಿ ರಿಪೋರ್ಟ್ ನಮಗೆ ಆಶ್ಚರ್ಯವನ್ನು ಉಂಟು ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದರು.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಹಿಂದೆಯೂ ಇದನ್ನೇ ನಾವು ಹಲವಾರು ಬಾರಿ ಹೇಳಿದ್ದೆವು. ಅದೇ ನಿಜವಾಗಿದೆ. ಲೋಕಾಯುಕ್ತ ಸಂಸ್ಥೆ ತನಿಖೆ ಮಾಡುತ್ತಿರುವಾಗ ರಾತ್ರಿ 8-9 ಗಂಟೆಗೆ ಮುಖ್ಯಮಂತ್ರಿಗಳ ಕುಟುಂಬಸ್ಥರು ಮಾವನ ಮನೆಗೆ ಹೋದ ಮಾದರಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಚೇರಿಗೆ ಭೇಟಿ ಕೊಡುತ್ತಿದ್ದರು. ಮೈಸೂರಿನ ಮುಡಾ ಹಗರಣದಲ್ಲಿ ಸುಮಾರು 5,000 ಕೋಟಿಯ ಅಕ್ರಮ ನಡೆದಿದೆ. ಮುಡಾದಲ್ಲಿ ಯಾವುದೇ ರೀತಿಯ ಹಗರಣ ಆಗಿಲ್ಲ ಎಂದು ಸಿದ್ದರಾಮಯ್ಯನವರು ಆರಂಭದಲ್ಲಿ ಹೇಳಿದ್ದರು. ತಮ್ಮ ಕುಟುಂಬಕ್ಕೆ ಕಾನೂನುಬಾಹಿರವಾಗಿ 14 ನಿವೇಶನಗಳು ಬಂದಿಲ್ಲ ಎಂದು ತಿಳಿಸಿದ್ದಾಗಿ ಗಮನ ಸೆಳೆದರು. ಬಿಜೆಪಿ- ಜೆಡಿಎಸ್ ಈ ವಿಷಯ ಮುಂದಿಟ್ಟು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿತ್ತು. ಸಿದ್ದರಾಮಯ್ಯನವರು ನಮ್ಮ ಹೋರಾಟದ ಒತ್ತಡಕ್ಕೆ ಮಣಿದು 14 ನಿವೇಶನಗಳನ್ನು ರಾತ್ರೋರಾತ್ರಿ ಹಿಂದಿರುಗಿಸುವುದಾಗಿ ಮುಡಾಕ್ಕೆ ಪತ್ರ ಬರೆದಿದ್ದರು ಎಂದು ಟೀಕಿಸಿದರು.
ಅಕ್ರಮವಾಗಿ 14 ನಿವೇಶನ ಬಂದಿಲ್ಲ ಎಂದಾದರೆ, ಅದನ್ನು ಹಿಂತಿರುಗಿಸಿದ್ದೇಕೆ? ಲೋಕಾಯುಕ್ತ ಕ್ಲೀನ್‌ಚಿಟ್ ಕೊಟ್ಟಿದೆ. ಒಬ್ಬ ಅಪರಾಧಿ ತಪ್ಪು ಮಾಡಿದ ಮೇಲೆ ಆ ಮಾತನ್ನು ಹಿಂತಿರುಗಿಸಿದರೆ ನಿರಪರಾಧಿ ಎಂದು ಕ್ಲೀನ್‌ಚಿಟ್ ಕೊಡಲಾಗಿದೆ ಎಂದರೆ, ಇದನ್ನು ಮಾಧ್ಯಮ ಸ್ನೇಹಿತರು ಮುಖ್ಯಮಂತ್ರಿಗಳಿಗೆ ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.
ಲೋಕಾಯುಕ್ತದ ಕ್ಲೀನ್‌ಚಿಟ್ ಫೇಕ್ ಕ್ಲೀನ್‌ಚಿಟ್ ಎಂದು ಆಕ್ಷೇಪಿಸಿದರು. ಮುಖ್ಯಮಂತ್ರಿಗಳೇ ಆಯ್ಕೆ ಮಾಡಿದ ಅಧಿಕಾರಿಗಳೇ ತನಿಖೆ ಮಾಡಿದ್ದಾರೆ. ಇನ್ನೇನನ್ನು ನಿರೀಕ್ಷೆ ಮಾಡಲು ಸಾಧ್ಯ? ಇದರ ಬಗ್ಗೆ ಬಿಜೆಪಿ ಏನು ಮಾಡಬೇಕೆಂಬ ಬಗ್ಗೆ ಹಿರಿಯರ ಜೊತೆ ಚರ್ಚಿಸಲಿದ್ದೇವೆ ಎಂದು ತಿಳಿಸಿದರು.