Wednesday, August 17, 2022

Latest Posts

ಕೆಟ್ಟ ವಿಚಾರಗಳು ಹೆಚ್ಚು ಪ್ರಚಾರ ಪಡೆದು ಒಳ್ಳೆಯ ವಿಚಾರಗಳ ಗಾಂಭೀರ್ಯತೆ ಕಳೆಯುತ್ತಿದೆ: ಪ್ರಾಣೇಶ್ ವಿಷಾದ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಸಂದೇಶಗಳು ಬಹುಬೇಗ ಬೇಗ ಪ್ರಚಾರ ಪಡೆದುಕೊಂಡು ಒಳ್ಳೆಯ ವಿಚಾರಗಳ ಗಾಂಭೀರ್ಯತೆಯನ್ನು ಕೆಡಿಸುತ್ತಿವೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ವಿಷಾದ ವ್ಯಕ್ತಪಡಿಸಿದರು.
ಅವರು ಭಾನುವಾರ ನಗರದ ಜಿಲ್ಲಾ ಬಿಜೆಪಿ ಕಛೇರಿ ಪಾಂಚಜನ್ಯದಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿಗೆ ದಿನನಿತ್ಯದ ಚಟುವಟಿಕೆಗಳು ಆರಂಭಗೊಳ್ಳುವುದೇ ಮಾಹಿತಿ ತಂತ್ರಜ್ಞಾನದಿಂದ. ಯುವ ಜನತೆ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದು. ಈ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಒಳಿತು. ಇಲ್ಲವಾದಲ್ಲಿ ಕೆಟ್ಟ ವಿಚಾರಗಳು ಹೆಚ್ಚು ಪ್ರಚಾರ ಗಳಿಸುವ ಮೂಲಕ ಒಳ್ಳೆಯ ವಿಚಾರಗಳ ಗಾಂಭೀರ್ಯತೆ ಹಾಗೂ ಅದರ ಮಹತ್ವವನ್ನು ಹಾಳುಮಾಡಲಿದೆ ಎಂದು ಎಚ್ಚರಿಸಿದರು.
ಸರ್ಕಾರಗಳನ್ನು ಉಳಿಸುವ, ಉರುಳಿಸುವ ಶಕ್ತಿ ಇತ್ತೀಚಿನ ಸಾಮಾಜಿಕ ಮಾಧ್ಯಮಗಳಲ್ಲಿದೆ. ದೇಶದಲ್ಲಿ ನಡೆಯುವ ಬೆಳವಣಿಗೆಗಳು, ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸಲು ಇವು ಮುಖ್ಯ ಸಾಧನವಾಗಿದ್ದು, ಈ ಹಿಂದೆ ಇವುಗಳ ಬಳಕೆ ಕಡಿಮೆಯಿತ್ತು. ಆದರೆ ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಸಾಮಾಜಿಕ ಮಾಧ್ಯಮಗಳು ಹೆಚ್ಚು ಬಳಕೆಯಲ್ಲಿದ್ದು, ಅದರಲ್ಲಿ ಹರಡುವ ವಿಷಯಗಳ ಕುರಿತು ವಿಮರ್ಶಿಸುವ ಸತ್ಯ-ಅಸತ್ಯತೆಗಳನ್ನು ತಿಳಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠವು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿಜೆಪಿ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಯೋಜನೆಗಳನ್ನು ಸಮಾಜದ ಎಲ್ಲಾ ಜನತೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜೊತೆಗೆ ಅಪಪ್ರಚಾರ ಮಾಡುವ ವಿರೋಧಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಇತ್ತೀಚಿಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ ಆದರೆ ಇದಕ್ಕೆ ಕಾರಣಗಳು ಏನು ಎಂಬುದರ ಕುರಿತು ಜನತೆಗೆ ಅರಿವು ಮೂಡಿಸಬೇಕಿದೆ ಎಂದರು.
ಕೋರೊನಾ ಕಾರಣದಿಂದಾಗಿ ಸರ್ಕಾರಕ್ಕೆ ಸುಮಾರು 63 ಲಕ್ಷ ಕೋಟಿ ಆದಾಯ ತೆರಿಗೆ ನಷ್ಟವಾಗಿದೆ. ಆರ್ಥಿಕ ಚೇತರಿಕೆ ಹಿನ್ನೆಲೆ ಸಾಕಷ್ಟು ವರ್ಗಗಳಿಗೆ ನೆರವು ನೀಡಿದೆ. ಇದೆಲ್ಲವನ್ನು ಅರಿಯಬೇಕು. ಆದರೆ ಸಾಮಾಜಿಕ ಮಾಧ್ಯಮಗಳು ಹೆಚ್ಚಾಗಿ ನಕರಾತ್ಮಕ ವಿಚಾರಗಳಿಗೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅರಿವಿಲ್ಲದ ವಿಚಾರಗಳನ್ನು ತಿಳಿಸಲು ಪ್ರಕೋಷ್ಠಗಳು ಅನುಕೂಲಕರವಾಗಿವೆ. ಬಿಜೆಪಿ ಯುವಜನತೆಗೆ ಆದ್ಯತೆ ನೀಡುವ ಮೂಲಕ ಪಕ್ಷದ ಸಂಘಟನೆಯಲ್ಲಿ ಜಿಲ್ಲೆ ಮುಂದಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ ಕಲ್ಮರುಡಪ್ಪ ಪ್ರ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟ ಆಲೋಚನೆಗಳು ಬೇಗ ಹರಿದಾಡುತ್ತವೆ ಆ ಹಿನ್ನೆಲೆ ಒಳ್ಳೆಯ ವಿಚಾರಗಳನ್ನು ಜನತೆಗೆ ಬಲವಂತವಾಗಿ ತುಂಬಬೇಕಾದ ಪರಿಸ್ಥಿತಿ ಇದೆ. ಸಾಮಾಜಿಕ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದ್ದು ಅತ್ಯಂತ ಎಚ್ಚರಿಕೆಯಿಂದ ಬಳಕೆ ಮಾಡಬೇಕು, ಕೆಟ್ಟ ವಿಚಾರಗಳಿಗೆ ಹೆಚ್ಚು ಆಸ್ಪದವಾಗದಂತೆ ಉತ್ತಮ ಬರಹಗಳ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ದೇಶದ ಆಗುಹೋಗುಗಳನ್ನು ಗಮನಿಸಲು, ಸರ್ಕಾರದ ಯೋಜನೆಗಳನ್ನು ಹೆಚ್ಚು ಜನತೆಗೆ ಶೀಘ್ರವಾಗಿ ಮಟ್ಟಿಸಲು ಉತ್ತಮ ಸಾಧನವಾಗಿದ್ದು ಸರಿಯಾಗಿ ನಿರ್ವಹಣೆ ಮಾಡುವಂತೆ ಪಕ್ಷದ ಮಾಧ್ಯಮ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ರಾಜ್ಯ ಸಹ ಸಂಚಾಲಕ ಪ್ರಶಾಂತ್ ಜಾದವ್, ರಾಜ್ಯ ಸಂಚಾಲಕ ವಿನೋದ್ ಕೃಷ್ಣಮೂರ್ತಿ, ಜಿಲ್ಲಾ ಉಪಾಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಜಿಲ್ಲಾ ಸೋಶಿಯಲ್ ಮೀಡಿಯಾ ಸಂಚಾಲಕ ಚೇತನ್ ಶೆಟ್ಟಿ, ಸಹ ಸಂಚಾಲಕ ಸಮೃದ್ಧ್ ಪೈ, ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್, ಮಾಧ್ಯಮ ವಕ್ತಾರ ಸುಧೀರ್, ರಾಜಪ್ಪ, ಸೇರಿದಂತೆ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!