ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಬದ್ಲಾಪುರದಲ್ಲಿ ಇಬ್ಬರು ನರ್ಸರಿ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಆಗಸ್ಟ್ 17 ರಂದು ಮಹಾರಾಷ್ಟ್ರದ ಪ್ರತಿಷ್ಠಿತ ನರ್ಸರಿ ಶಾಲೆಯಲ್ಲಿ 4 ವರ್ಷದ ಇಬ್ಬರು ಹೆಣ್ಣುಮಕ್ಕಳ ಮೇಲೆ ಶಾಲಾ ಸಿಬ್ಬಂದಿ ಬಲತ್ಕಾರ ಮಾಡಿದ್ದ. ಶಾಲಾ ಶೌಚಾಲಯದಲ್ಲಿ ಈ ಘಟನೆ ನಡೆದಿತ್ತು. ಮಾಹಿತಿ ಹೊರಬೀಳುತ್ತಿದ್ದಂತೆ ಪೋಷಕರು ಸೇರಿದಂತೆ ಸ್ಥಳೀಯರು ಶಾಲೆಗೆ ಮುತ್ತಿಗೆ ಹಾಕಿದ್ದರು. ಘಟನೆ ಬೆನ್ನಲ್ಲೇ ಪೊಲೀಸರು ಆರೋಪಿ ಅಕ್ಷಯ್ ಶಿಂಧೆಯನ್ನು ಬಂಧಿಸಿದ್ದರು. ಇದೀಗ ಈ ಆರೋಪಿಗೆ ಥಾಣೆ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಈ ಪ್ರಕರಣದ ಗಂಭೀರತೆ ಹಾಗೂ ಆರೋಪಿಯನ್ನು ಪರಿಗಣಿಸಿದ ಥಾಣೆ ಪೊಲೀಸರು ಬೇರೆ ಜೈಲಿಗೆ ವರ್ಗಾವಣೆ ಮಾಡಲು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ಆರೋಪಿ ಅಕ್ಷಯ್ ಶಿಂಧೆ ಪೊಲೀಸರ ರಿವಾಲ್ವರ್ ವಶಪಡಿಸಿಕೊಂಡು ಗುಂಡು ಹಾರಿಸಿದ್ದಾನೆ. ಮೂರು ಸುತ್ತಿನ ಗುಂಡಿನಲ್ಲಿ ಒಂದು ಗುಂಡು ಪೊಲೀಸ್ ಅಧಿಕಾರಿಗೆ ತಾಗಿ ಗಾಯಗೊಂಡಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡ ಆರೋಪಿ ಬಳಿಕ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ.
ಘಟನೆ ಕುರಿತು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಆರೋಪಿ ರಿವಾಲ್ವರ್ ಕಸಿದುಕೊಂಡು ಏಕಾಏಕಿ ದಾಳಿ ನಡೆಸಿದ್ದಾನೆ. ಹೀಗಾಗಿ ಓರ್ವ ಪೊಲೀಸ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿವಾಲ್ವರ್‌ನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ನಾಲ್ಕನೇ ಗುಂಡು ಹಾರಿಸುವ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಹೀಗಾಗಿ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಮಿಷನರ್ ಹೇಳಿದ್ದಾರೆ.