ಪಿ.ವಿ.ಸಿಂಧುಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಆದ ಅನ್ಯಾಯಕ್ಕೆ ಕ್ಷಮೆಯಾಚಿಸಿದ ಬ್ಯಾಡ್ಮಿಂಟನ್‌ ಸಂಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಏಪ್ರಿಲ್‌ನಲ್ಲಿ ನಡೆದಿದ್ದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ರೆಫರಿ ಎಸಗಿದ್ದ ʼಗಂಭೀರ ಲೋಪʼಕ್ಕೆ  ಸಂಬಂಧಿಸಿದಂತೆ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿಯು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಬಳಿ ಕ್ಷಮೆಯಾಚಿಸಿದೆ.
ಜಪಾನ್‌ನ ಅಕಾನೆ ಯಮಗುಚಿ ವಿರುದ್ಧದ ಸೆಮಿಫೈನಲ್ ಪಂದ್ಯದ ನಡುವಿನ ಅವಧಿಯಲ್ಲಿ ಪಿ.ವಿ.ಸಿಂಧು ವಿರುದ್ಧವಾಗಿ ಅಂಫೈರ್‌ ಶಾಂಕಿಂಗ್‌ ನಿರ್ಣಯ ನೀಡಿದ್ದರು. ಪಂದ್ಯದ ಮೊದಲ ಸೆಟ್ ನಿರಾಯಾಸವಾಗಿ ಗೆದ್ದ ಸಿಂಧು ಎರಡನೇ ಗೇಮ್‌ನಲ್ಲಿ 14-11 ರಿಂದ ಮುನ್ನಡೆ ಸಾಧಿಸಿದ್ದರು. ಈ ವೇಳೆ ಸಿಂಧು ಸರ್ವ್ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದ್ದ ಅಂಪೈರ್‌ ‌ಎದುರಾಳಿ ಯಮಗುಚಿಗೆ ಒಂದು ಪೆನಾಲ್ಟಿ ಪಾಯಿಂಟ್ ನೀಡಿದ್ದರು. ಇದು ಸಿಂಧುಗೆ ಆಘಾತ ತಂದಿತ್ತು. ಇದನ್ನು ʼಅನ್ಯಾಯʼ ಎಂದು ಕರೆದ ಸಿಂಧು ಪಂದ್ಯ ನಡೆಯುವಾಗಲೇ ಕಣ್ಣೀರಿಟ್ಟಿದ್ದರು. ಅಲ್ಲಿಂದ ಆ ಪಂದ್ಯದ ಗತಿಯೇ ಬದಲಾಗಿತ್ತು. ಏಕಾಗ್ರತೆ ಕಳೆದುಕೊಂಡ ಸಿಂಧು 21-13, 19-21, 16-21 ರಿಂದ ಪಂದ್ಯವನ್ನೇ ಸೋತು ಪ್ರತಿಷ್ಠಿತ ಟೂರ್ನಿಯಲ್ಲಿ ಕಂಚಿಗೆ ತೃಪ್ತಿಪಡಬೇಕಾಯಿತು.
ʼನಾನು ಸರ್ವ್‌ ಮಾಡುವ ಸಮಯದಲ್ಲಿ ಎದುರಾಳಿ ಸಿದ್ಧರಿರಲಿಲ್ಲ. ಆದರೆ ನೀವು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಅಂಪೈರ್ ನನಗೆ ಹೇಳಿದರು. ಆ ಬಳಿಕ ಅಂಪೈರ್ ಇದ್ದಕ್ಕಿದ್ದಂತೆ ಅವಳಿಗೆ ಪಾಯಿಂಟ್ ನೀಡಿದರು ಇದು ನಿಜವಾಗಿಯೂ ನನಗೆ ಮಾಡಿದ ಅನ್ಯಾಯವಾಗಿದೆ. ನಾನು ಸೋಲಲು ಇದು ಮುಖ್ಯಕಾರಣವಾಯಿತು ಎಂದು ಭಾವಿಸುತ್ತೇನೆ ” ಎಂದು ಪಂದ್ಯ ಮುಗಿದ ಬಳಿಕ ಸಿಂಧು ಹೇಳಿದ್ದರು.
ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್‌ನ (ಬಿಡಬ್ಲ್ಯೂಎಫ್) ಅಥ್ಲೀಟ್‌ಗಳ ಆಯೋಗದ ಸದಸ್ಯರಾಗಿರುವ ಸಿಂಧು, ತಕ್ಷಣವೇ ವಿಶ್ವ ಹಾಗೂ ಮತ್ತು ಏಷ್ಯನ್ ಬ್ಯಾಡ್ಮಿಂಟನ್ ಒಕ್ಕೂಟಕ್ಕೆ ಪತ್ರ ಬರೆದು‌ ಅಂಪೈರ್‌ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
“ಈ ಬಗ್ಗೆ ಪತ್ರಮುಖೇನ ಕ್ಷಮೆಯಾಚಿಸಿರುವ ಬ್ಯಾಡ್ಮಿಂಟನ್ ಏಷ್ಯಾ ತಾಂತ್ರಿಕ ಸಮಿತಿಯ ಅಧ್ಯಕ್ಷ, ಚಿಹ್ ಶೆನ್ ಚೆನ್, ʼನಿಮಗೆ ಆದ ಅನ್ಯಾಯಕ್ಕೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಇದು ಕ್ರೀಡೆಯ ಒಂದು ಭಾಗವಾಗಿದೆ ಮತ್ತದನ್ನು ನೀವು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ. “ದುರದೃಷ್ಟವಶಾತ್, ಈ ಸಮಯದಲ್ಲಿ ಯಾವುದೇ ತಿದ್ದುಪಡಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಾವು ಆ ಬಳಿಕ ಅಂತಹ ತಪ್ಪು ಪುನರಾವರ್ತನೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ” ಎಂದು ಸಿಂಧುಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!