ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸ ದಿಗಂತ ವರದಿ, ಬಾಗಲಕೋಟೆ:
ಕೋವಿಡ್ ಎರಡನೇ ಅಲೆಯ ಅಬ್ಬರಕ್ಕೆ ಕೋವಿಡ್ನಿಂದ ತಂದೆ ತಾಯಿಯನ್ನು ಕಳೆದುಕೊಂಡ ಬಾಗಲಕೋಟೆ 5 ಮಕ್ಕಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 32 ಮಕ್ಕಳು ಅನಾಥರಾಗಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮಾದ್ಯಮದವರೊಂದಿಗೆ ಈ ವಿಷಯ ತಿಳಿಸಿದ ಅವರು ಕೋವಿಡ್ನಿಂದ ಮೃತಪಟ್ಟು ತಂದೆ-ತಾಯಿಯರಿಂದ ತಬ್ಬಲಿಯಾದ ಮಕ್ಕಳಿಗೆ ಸರಕಾರ ಕಾಳಜಿ ವಹಿಸಿದ್ದು, ಬಾಲಸೇವಾ ಯೋಜನೆ ಜಾರಿಗೆ ತಂದಿದೆ. ಅನಾಥರಾದ ಮಕ್ಕಳಿಗೆ ಪ್ರತಿ ತಿಂಗಳು 3500 ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ ವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಲ್ಯಾಪ್ಟಾಪ್ ಸಹ ನೀಡಲಾಗುತ್ತಿದ್ದು, ಹೆಣ್ಣು ಮಕ್ಕಳಿದ್ದಲ್ಲಿ ಅಂತವರಿಗೆ 18 ವರ್ಷದ ನಂತರ 1 ಲಕ್ಷ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅನಾಥಗೊಂಡ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ದತ್ತು ಪ್ರಕ್ರಿಯೆ ಸರಲೀಕರಣಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ದಾನಿಗಳು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾದಲ್ಲಿ ಅವಕಾಶ ನೀಡಲಾಗುತ್ತದೆ. ಜಿಲ್ಲೆಯಲ್ಲಿ 166 ಅಪೌಷ್ಠಿಕ ಮಕ್ಕಳಿದ್ದು, ಅವರಿಗೆ ಚವನಪ್ರಾಸ್ ನೀಡಲು ಸಲಹೆ ನೀಡಲಾಗಿದೆ. ಮಕ್ಕಳ ಸಹಾಯವಾಣಿ 1098 ನ್ನು ಮತ್ತಷ್ಟು ಕ್ರೀಯಾಶೀಲವಾಗಿಸಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 51 ಬಾಲ್ಯವಿವಾಹ ನಡೆಯುತ್ತಿರುವ ಪೈಕಿ 44 ವಿವಾಹ ತಡೆಯಲಾಗಿದೆ. ಅದರಲ್ಲಿ 5 ಎಫ್.ಐ.ಆರ್ ದಾಖಲಾಗಿವೆ. ಸಂಭವನೀಯ 3ನೇ ಅಲೆಯಿಂದ ಮಕ್ಕಳ ಮೇಲೆ ಪರಿಣಾಮ ಬೀರುವ ಸಂಭವವಿದ್ದು, ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮೂರು ಬಾರಿ ಸಭೆ ನಡೆಸಲಾಗಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಮಕ್ಕಳ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಚಿಕಿತ್ಸೆಗೆ ಎಲ್ಲ ರೀತಿಯ ಸಿದ್ದತೆ ಕೈಗೊಳ್ಳಲಾಗುವುದೆಂದು ಜೊಲ್ಲೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.