ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ: ಕೊಡಗು ಬಿಜೆಪಿ ಆಕ್ರೋಶ

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ತಾನು‌ ಅಧಿಕಾರಕ್ಕೆ ಬಂದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು,‌ ಇದಕ್ಕೆ ಕೊಡಗು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ವಕ್ತಾರ ಮಹೇಶ್ ಜೈನಿ ಅವರು, ಭಜರಂಗದಳ ಹಿಂದುಗಳ ಹಿತ ಕಾಯುವ ಸಂಘಟನೆಯೇ ಹೊರತು ಇತರ ಮತೀಯ ಸಂಘಟನೆಗಳಂತೆ‌ ಸಮಾಜದಲ್ಲಿ ಶಾಂತಿಯನ್ನು ಕದಡುವ ಸಂಘಟನೆಯಲ್ಲ. ಭಜರಂಗದಳ ಹಿಂದು ಮಾತೆಯರ, ಗೋವು, ಗುಡಿ ಗೋಪುರಗಳ ರಕ್ಷಣೆಗೆ ಕಟಿಬದ್ಧವಾಗಿರುವ ಸಂಘಟನೆಯಾಗಿದ್ದು, ಇದನ್ನು ನಿಷೇಧಿಸುವುದಾಗಿ‌ ಹೇಳುವ ಮೂಲಕ ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ ಮತ್ತೊಮ್ಮೆ ಅನಾವರಣಗೊಂಡಿದೆ ಎಂದು ಟೀಕಿಸಿದ್ದಾರೆ.

ಪ್ರತಿ ಹಿಂದೂ ಕೂಡಾ‌ ಕಾಂಗ್ರೆಸ್‌ನ ಈ ಕುಟಿಲ ನೀತಿಯನ್ನು ಗಮನಿಸುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಮಹೇಶ್ ಜೈನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!