ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ಎಸ್ ಐಟಿ ತನಿಖೆಗೆ ಒಪ್ಪಿಸಲು ಬಜರಂಗದಳ ಆಗ್ರಹ

ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪ್ರಕರಣವನ್ನು ವಿಶೇಷ ಪೊಲೀಸ್ ತನಿಖಾ ದಳಕ್ಕೆ (ಎಸ್ ಐಟಿ) ಒಪ್ಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸರಕಾರವನ್ನು ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್., ಪ್ರವಿಣ್ ಹತ್ಯೆ ಯೋಜಿತ ಕೃತ್ಯವಾಗಿದೆ. ಇದರ ಹಿಂದಿರುವ ಆರೋಪಿಗಳನ್ನು ಶೀಘ್ರ ಬಂಧಿಸಲು ಎಸ್ ಐಟಿ ರಚನೆ ಮಾಡಬೇಕು. ಓರ್ವ ದಕ್ಷ ಪೊಲೀಸ್ ಅಧಿಕಾರಿಯನ್ನು ನೇಮಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರವೀಣ್ ನೆಟ್ಟಾರ್ ಅಂತಿಮ ಶವಯಾತ್ರೆ ಸಂದರ್ಭ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಅಮಾಯಕ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ. ನಿಯಮ ಮೀರಿ ವರ್ತಿಸಿದ ಪೊಲೀಸರನ್ನು ಕೂಡ ಅಮಾನತು ಮಾಡಬೇಕು. ಗೃಹ ಸಚಿವರು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಪ್ರವೀಣ್ ಹತ್ಯೆಯಿಂದ ಇಡೀ ರಾಜ್ಯದಲ್ಲಿ ನೋವಿನ ವಾತಾವರಣ ನಿರ್ಮಾಣವಾಗಿದೆ. ಹಿಂದೂ ಕಾರ್ಯಕರ್ತನೊಬ್ಬನ ಅಗಲಿಕೆ ಇಡೀ ಸಮಾಜಕ್ಕೆ ಆದ ನಷ್ಟವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಶುಕ್ರವಾರ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಸುನಿಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಪುತ್ತೂರು ವಿಭಾಗ ಸಂಚಾಲಕ ಭರತ್ ಕುಮ್ಡೇಲು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!