ಭಾರತದ ಸುದ್ದಿವಾಹಿನಿಗಳ ಪ್ರಸಾರಕ್ಕೆ ನಿಷೇಧ ಹೇರಿ: ಬಾಂಗ್ಲಾ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಚೋದನಕಾರಿ ಸುದ್ದಿಗಳನ್ನು ಉಲ್ಲೇಖಿಸಿ ಪ್ರಸಾರ ಮಾಡುತ್ತಿರುವ ಭಾರತದ ಎಲ್ಲಾ ಸುದ್ದಿವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಬಾಂಗ್ಲಾದೇಶ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಎಖ್ಲಾಸ್ ಉದ್ದೀನ್ ಭುಯಾನ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿಗಳಾದ ಫಾತಿಮಾ ನಜೀಬ್ ಸಿಕ್ದರ್ ಮಹಮುದೂರ್ ರಾಜಿ ಅವರನ್ನೊಳಗೊಂಡ ಹೈಕೋರ್ಟ್ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಬಹುದು ಎಂದು ವಕೀಲ ಭೂಯಾನ್ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಎಲ್ಲಾ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಎಲ್ಲಾ ಭಾರತೀಯ ಟಿವಿ ಚಾನೆಲ್‌ಗಳ ಪ್ರಸಾರವನ್ನು ನಿಷೇಧಿಸಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಆಪರೇಷನ್ ಆಕ್ಟ್ 2006 ರ ಸೆಕ್ಷನ್ 29 ರ ಅಡಿಯಲ್ಲಿ ನಿರ್ದೇಶನ ನೀಡುವಂತೆ ರಿಟ್ ಅರ್ಜಿಯಲ್ಲಿ ಕೋರಲಾಗಿದೆ. ಬಾಂಗ್ಲಾದೇಶದಲ್ಲಿ ಭಾರತೀಯ ಟಿವಿ ಚಾನೆಲ್‌ಗಳ ಮೇಲೆ ನಿಷೇಧ ಹೇರುವ ನಿಯಮವನ್ನು ಏಕೆ ಹೊರಡಿಸಬಾರದು ಎಂದು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ಸ್ಟಾರ್ ಜಲ್ಶಾ, ಸ್ಟಾರ್ ಪ್ಲಸ್, ಝೀ ಬಾಂಗ್ಲಾ, ರಿಪಬ್ಲಿಕ್ ಬಾಂಗ್ಲಾ ಮತ್ತು ಇತರ ಭಾರತೀಯ ಸುದ್ದಿವಾಹಿನಿಗಳ ಪ್ರಸಾರವನ್ನು ನಿಷೇಧಿಸಲು ರಿಟ್ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಭಾರತೀಯ ಸುದ್ದಿವಾಹಿನಿಗಳಲ್ಲಿ ಪ್ರಚೋದನಕಾರಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಬಾಂಗ್ಲಾದೇಶದ ಸಂಸ್ಕೃತಿಯನ್ನು ವಿರೋಧಿಸುವ ವಿಷಯದ ಅನಿಯಂತ್ರಿತ ಪ್ರಸಾರಗಳು ಯುವಜನತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ವಾರ್ತಾ ಸಚಿವಾಲಯ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗ (BTRC) ಮತ್ತು ಇತರರನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!