ಬೆಂಗಳೂರು, ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ : ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು, ಮೈಸೂರು ದಶಪಥ ರಸ್ತೆಯಲ್ಲಿನ ಸಮಸ್ಯೆಗಳ ವಿಚಾರ ಕರ್ನಾಟಕ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ದಶಪಥ ಹೆದ್ದಾರಿಯಲ್ಲಿನ ಟೋಲ್ ಶುಲ್ಕ ಸಂಗ್ರಹಣೆ ಆರಂಭದ ಸುತ್ತ ಉಂಟಾದ ವಿವಿಧ ಸಮಸ್ಯೆಗಳ ಕುರಿತಾಗಿ ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ನಡೆಸಿದೆ.

ಈ ಸಮಸ್ಯೆಗಳ ಬಗ್ಗೆ ಮೂರು ವಾರದಲ್ಲಿ ಉತ್ತರಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸೂಚನೆ ನೀಡಿದೆ.

ಬುಧವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ಈ ಸಮಸ್ಯೆಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳು ನೂತನ ದಶಪಥ ಹೆದ್ದಾರಿಯಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಲ್ಲದೇ ಪ್ರಯಾಣಿಕರು ಹೇಳುತ್ತಿರುವ ಸಮಸ್ಯೆಗಳು ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿನ ಟೋಲ್ ಬೂತ್‌ಗಳ ಪರಿಸ್ಥಿತಿಯನ್ನು ಎತ್ತಿ ತೋರಿಸಿವೆ ಎಂದು ಅಭಿಪ್ರಾಯಪಟ್ಟಿತು.

ಬೆಂಗಳೂರು ಮತ್ತು ಕನಕಪುರ ನಡುವಿನ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) ವಿಸ್ತರಣೆಯ ನಡೆಯುತ್ತಿರುವ ಕಾಮಗಾರಿಯಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸಿಲ್ಲ. ಇಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇದೆ ಎಂದು 2022 ರಲ್ಲಿ ಸಲ್ಲಿಸಲಾದ ಪಿಐಎಲ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈಗಿನ ಸಮಸ್ಯೆಗಳ ಪೀಠ ಗಂಭೀರವಾಗಿ ಪರಿಗಣಿಸಿದೆ.

ಎಕ್ಸ್‌ಪ್ರೆಸ್‌ವೇ ನಲ್ಲಿ ಟೋಲ್ ಶುಲ್ಕ ಸಂಗ್ರಹ ಕುರಿತು ಸಾಲು ಸಾಲು ಪತ್ರಿಕಾ ವರದಿಗಳು ಬಿತ್ತರವಾಗಿವೆ. ಎಕ್ಸ್‌ಪ್ರೆಸ್‌ವೇ ಸ್ಟ್ರೆಚ್ ಸಂಪೂರ್ಣ ನಿರ್ಮಾಣ ಕಾರ್ಯ ಪೂರ್ಣಗೊಳಿಸದೆ ಟೋಲ್ ಸಂಗ್ರಹ ಪ್ರಾರಂಭಿಸಲಾಗಿದೆ ಎಂಬುದನ್ನು ವರದಿ ಮೂಲಕ ಗಮನಿಸಿರುವುದಾಗಿ ನ್ಯಾಯಪೀಠ ಹೇಳಿದೆ.

ರಾಷ್ಟ್ರೀಯ ಹೆದ್ದಾರಿಗಳ ಬಳಕೆದಾರರ ಶುಲ್ಕ (ಟೋಲ್ ಶುಲ್ಕ) ಸಂಗ್ರಹಿಸುವ ಮೊದಲು ನಿಯಮಗಳಡಿ ಸಾರ್ವಜನಿಕವಾಗಿ ತಿಳಿಸಬೇಕು. ಅದರೊಂದಿಗೆ ವಿವಿಧ ಪೂರ್ವಾಪೇಕ್ಷಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೆ ಇಲ್ಲಿ ಹಾಗೇ ಆಗಿಲ್ಲ ಎಂಬುದು ಎದ್ದು ಕಾಣುತ್ತದೆ. ಈ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪರಿಗಣಿಸಬೇಕಾಗಿದೆ ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ ಎರಡನೇ ವಾರಕ್ಕೆ ಮುಂದೂಡಿತು.

ಹೆದ್ದಾರಿ ಪ್ರಾಧಿಕಾರ ಮಾಡಿದ ಹಕ್ಕುಗಳನ್ನು ಪರಿಶೀಲನೆ ಕುರಿತಾಗಿ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಅವರನ್ನು ನ್ಯಾಯಾಲಯದ ಆಯುಕ್ತರನ್ನಾಗಿ ಪೀಠವು ನೇಮಿಸಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!