ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ದಾವಣಗೆರೆ:
ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂಬ ಅಮಿತ್ ಶಾ ಹೇಳಿಕೆಗೆ ನಾವೆಲ್ಲರೂ ಬದ್ಧ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಭೈರತಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ವಿಚಾರದ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಕಾಲದಲ್ಲಿ ಯಡಿಯೂರಪ್ಪನವರು ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಅಮಿತ್ ಶಾ ಕೂಡ ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಇಟ್ಟುಕೊಂಡು ಮಾತಾಡಿದ್ದಾರೆ. ಪಕ್ಷದ ವರಿಷ್ಠ ಅಮಿತ್ ಶಾ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂಬ ಅಮಿತ್ ಶಾ ಹೇಳಿಕೆಗೆ ಬದ್ಧ ಎಂದು ಸ್ಪಷ್ಟಪಡಿಸಿದರು.
ಬಿ.ಎಸ್.ಯಡಿಯೂರಪ್ಪನವರು ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಧೀಮಂತ ನಾಯಕ. ಬಿಎಸ್ವೈ ಬಗ್ಗೆ ಪಕ್ಷದ ವರಿಷ್ಠರು ಉತ್ತಮ ಅಭಿಪ್ರಾಯ ಹೊಂದಿದ್ದಾರೆ.
ಅವರು ರಾಜ್ಯ ಪ್ರವಾಸ ಮಾಡುವುದರಲ್ಲಿ ತಪ್ಪೇನಿಲ್ಲ. ಯಡಿಯೂರಪ್ಪನವರ ಪ್ರವಾಸದ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಯಡಿಯೂರಪ್ಪ ಅಥವಾ ಜಗದೀಶ ಶೆಟ್ಟರ್ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಬೆಳಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಈ ಬಗ್ಗೆ ನೀಡಿದ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ರಾಜ್ಯದ ಅಭಿವೃದ್ಧಿ ಚಿಂತನೆ ಮಾತ್ರ ನಮ್ಮ ಗುರಿಯಾಗಿದೆ. ಸಣ್ಣಪುಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಆಡಳಿತ ಯಂತ್ರ ಚುರುಕುಗೊಳಿಸುವ ಪ್ರಯತ್ನದಲ್ಲಿದ್ದು, ಯತ್ನಾಳ್ ಹೇಳಿಕೆಗೆ ಯಾವುದೇ ರಿಯಾಕ್ಷನ್ ಅಗತ್ಯವಿಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ದಿಟ್ಟ ನಿರ್ಧಾರ ಕೈಗೊಳ್ಳುತ್ತೇವೆ. ಮುಖ್ಯಮಂತ್ರಿಗಳು ಈ ಕುರಿತು ಕಾನೂನಾತ್ಮವಾಗಿ ಪರಿಹಾರ
ಕಂಡುಕೊಳ್ಳಲಿದ್ದಾರೆ ಎಂದರಲ್ಲದೆ, ಜಿಲ್ಲಾ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ತರಾತುರಿಯಲ್ಲಿ ಕ್ಷೇತ್ರ ವಿಂಗಡಣೆಯಾಗಿತ್ತು. ಅಧಿಕಾರಿಗಳ ಸಮ್ಮುಖದಲ್ಲಿ ಸಾಧಕ-ಬಾಧಕ ಚರ್ಚಿಸಿ, ಮತ್ತೊಮ್ಮೆ ಅದರ ಪರಿಶೀಲನೆ ನಡೆಸಲಾಗುವುದು ಎಂದರು.