Saturday, August 13, 2022

Latest Posts

ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ನಮ್ಮ ಜೀವನ ಭದ್ರ: ಧರ್ಮಪಾಲನಾಥ ಶ್ರೀ

ಹೊಸ ದಿಗಂತ ಆನ್ ಲೈನ್ ಡೆಸ್ಕ್ : 

ಭಾರತೀಯ ಪರಂಪರೆಯಲ್ಲಿ ಧರ್ಮದ ಆಚರಣೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ
ನಮ್ಮ ಜೀವನ ನಿಂತಿದೆ. ನಿರಂತರ ಆಚರಣೆಯಿಂದಲೇ ನಮ್ಮ ಧರ್ಮ ಮತ್ತು ಸಂಸ್ಕೃತಿಯ ಉಳಿವು ಸಾಧ್ಯ ಎಂದು ಆದಿಚುಂಚನಗಿರಿ
ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ರವಿವಾರ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದ್ವೇಷ, ಅಸೂಯೆಯ ಕಾರಣದಿಂದಾಗಿಯೇ ಮನುಷ್ಯ ಜೀವನ ಅಶಾಂತಿಯಿಂದ ತುಂಬಿದೆ. ಬೆರಳೆಣಿಕೆಯ ದಿನ ಬದುಕುವ ಪತಂಗದ ಖುಷಿಯ ಜೀವನ ವರ್ಷಗಟ್ಟಲೆ ಬದುಕುವ ಮನುಷ್ಯನಿಗೆ ಮಾದರಿಯಾಗಬೇಕಿದೆ. ನಮಗೆ ದೇವರು ಎಲ್ಲಾ ಸವಲತ್ತುಗಳಿಂದ ಕೂಡಿದ ಮನುಷ್ಯ ಜೀವನವನ್ನು ಕರುಣಿಸಿದ್ದಾನೆ. ಆದರೆ ಪ್ರಾಣಿಗಳಿಗೆ ಅವೆಲ್ಲವೂ ಇಲ್ಲ. ಆದರೆ ಪ್ರಾಣಿಗಳು ಎಂದಿಗೂ ತಮ್ಮ ಜೀವನ ಧರ್ಮ ಬಿಟ್ಟು ಹೋಗುವುದಿಲ್ಲ. ಆದರೆ ಎಲ್ಲವೂ ಇರುವ ಮನುಷ್ಯ ಮಾತ್ರ ಅಧರ್ಮದ ದಾರಿಯನ್ನೇ ಹಿಡಿಯುತ್ತಾನೆ. ನಾವು ಪ್ರಾಣಿ, ಪಕ್ಷಿ ಹಾಗೂ ನಿಸರ್ಗದಿಂದ ಕಲಿಯುವುದು ಬಹಳಷ್ಟಿದೆ ಎಂದ ಅವರು ನಮ್ಮ ಗಳಿಕೆಯ ಒಂದಂಶವನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ಮಾತನಾಡಿ ಶುಭ ಹಾರೈಸಿದರು.
2019-20ನೇ ಸಾಲಿನ ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಷಂಕ ಗಳಿಸಿದ ಗೌಡ ಸಮಾಜದ ವಿದ್ಯಾರ್ಥಿಗಳಿಗೆ
ಪ್ರತಿಭಾ ಪುರಸ್ಕಾರ ಪ್ರಾಯೋಜಿಸಿ, ವಿತರಿಸಿದ ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣ ಗೌಡ ಪೂಯಿಲ ಮಾತನಾಡಿ ಶುಭ ಹಾರೈಸಿದರು. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಕೋಡಿಬೈಲು, ಯುವ ಘಟಕದ ಗೌರವಾಧ್ಯಕ್ಷ ಗಣೇಶ್ ಕೈಕುರೆ, ಮಹಿಳಾ ಘಟಕದ ಅಧ್ಯಕ್ಷೆ ನೀಲಾವತಿ ಶಿವರಾಮ್, ಉದ್ಯೋಗಸ್ಥರ ವಿಭಾಗದ ಅಧ್ಯಕ್ಷ ಆನಂದ ಗೌಡ, ವ್ಯಾಪಾರಸ್ಥರ ವಿಭಾಗದ ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ ಉಪಸ್ಥಿತರಿದ್ದರು. ಕುರುಂಜಿ ವೆಂಕಟ್ರಮಣ ಗೌಡರ ಸ್ಮರಣಾರ್ಥ ಜರಗಿದ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾ.ಪಂ. ಹಾಗೂ ಸಹಕಾರಿ ಸಂಘದ ಚುನಾವಣೆಯಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು.
ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಗೌಡ ಕೋಲಂತಾಡಿ ವರದಿ ವಾಚಿಸಿದರು. ಕ್ರೀಡಾ ಸಂಚಾಲಕ ಮೋಹನ ಗೌಡ ಕೆರೆಕ್ಕೋಡಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿ, ಸಂಘದ ಕೋಶಾಽಕಾರಿ ಪೂರ್ಣೇಶ್ ಗೌಡ ಬಿ.ಎಂ. ವಂದಿಸಿದರು. ಸೀತಾರಾಮ ಗೌಡ ಪೊಸವಳಿಕೆ ನಿರೂಪಿಸಿದರು.
ವೈದಿಕ ಕೆ. ಪ್ರಸಾದ ಕೆದಿಲಾಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಽಗಳು ಜರಗಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss