Saturday, July 2, 2022

Latest Posts

ಬಿಡಿಎ ಕಚೇರಿಗಳಲ್ಲಿ ಇಂದು ಕೂಡ ಮುಂದುವರೆದ ಎಸಿಬಿ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಿಂದ ಬಿಡಿಎ ಕೇಂದ್ರ ಕಚೇರಿ ಒಳಗೊಂಡಂತೆ ಒಟ್ಟು ೫ ಬಿಡಿಎಗೆ ಸಂಬಂಧಿಸಿದ ಕಚೇರಿಗಳಲ್ಲಿ ಮಂಗಳವಾರ ಶೋಧನಾ ಕಾರ್ಯ ಕೈಗೊಳ್ಳಲಾಯಿತು. ಆರ್.ಟಿ ನಗರದಲ್ಲಿನ ಬಿಡಿಎ ಉತ್ತರ ವಿಭಾಗದ ಕಚೇರಿ, ವಿಜಯನಗರದಲ್ಲಿನ ಪಶ್ಚಿಮ ವಿಭಾಗದ ಕಚೇರಿ, ಎಚ್.ಎಸ್.ಆರ್.ಲೇಔಟ್‌ನ ಪೂರ್ವ ವಿಭಾಗದ ಕಚೇರಿ ಮತ್ತು ಬನಶಂಕರಿಯಲ್ಲಿನ ದಕ್ಷಿಣ ವಿಭಾಗದ ಅಧಿಕಾರಿಗಳ ಕಚೇರಿಗಳಲ್ಲಿ ಶೋಧನೆ ಮುಂದುವರೆಸಲಾಗಿದೆ.

ಮುಂದುವರೆದ ದಾಳಿಯಲ್ಲಿ ಬಿಡಿಎ, ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಬಿಡಿಎನಿಂದ ವಶಪಡಿಸಿಕೊಂಡ ಜಮೀನಿನ ಪರಿಹಾರದ ಮೊತ್ತವನ್ನು ಸುಳ್ಳು ಮಾಹಿತಿ ನೀಡಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಅನರ್ಹ ವ್ಯಕ್ತಿಗಳಿಗೆ ಸಿಗುವಂತೆ ನೀಡಲಾಗಿರುವುದು ಪತ್ತೆಯಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ, ಭಾರತ್ ಎಚ್.ಬಿ.ಸಿ.ಎಸ್. ಲೇಔಟ್‌ನ ನಾಗರಿಕ ಸೌಲಭ್ಯ ನಿವೇಶನ(ಸಿ.ಎ.ಸೈಟ್)ಗಳನ್ನು ನಾಗರಿಕ ಸೌಲಭ್ಯಗಳ ಉದ್ದೇಶಕ್ಕಾಗಿ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ. ಸದರಿ ಸಂಘ ಸಂಸ್ಥೆಗಳು ಉದ್ದೇಶಿತ ಸೌಲಭ್ಯಗಳಗಾಗಿ ಬಳಕೆ ಮಾಡಿಕೊಳ್ಳದೆ ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದೆ.

ಬೆಂಗಳೂರು ನಗರ, ಎಚ್.ಎಸ್.ಆರ್. ಲೇಔಟ್, 3ನೇ ಸೆಕ್ಟರ್ ಮತ್ತು ಬೆಂಗಳೂರು ನಗರ, ಮುಂದುವರೆದ ಮಹಾಲಕ್ಷ್ಮೀ ಬಡಾವಣೆ, ಸಿ.ಎ. ನಿವೇಶನಗಳನ್ನು ನಾಗರಿಕ ಸೌಲಭ್ಯ ನಿವೇಶನ(ಸಿ.ಎ.ಸೈಟ್)ಗಳನ್ನು ಬಿಡಿಎ ಅನುಮೋದಿತ ನಕ್ಷೆ ರೀತ್ಯಾ ಕಟ್ಟವನ್ನು ನಿರ್ಮಾಣ ಮಾಡದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ.

ಕಡತಗಳ ಪರಿಶೀಲನೆಯಿಂದ ನಿವೇಶನ ಹಂಚಿಕೆದಾರರಿಗೆ ಹಂಚಿಕೆಯಾದ ಸ್ಥಳದಲ್ಲಿ ಹಂಚಿಕೆ ಮಾಡದೇ ನಿಯಮ ಬಾಹಿರವಾಗಿ ಬೇರೆ ಕಡೆಗಳಲ್ಲಿ ಹಂಚಿಕೆ ಮಾಡಿ ಅವ್ಯವಹಾರ ಮಾಡಿರುವುದು ಕಂಡುಬಂದಿದೆ.

ಹಳೆಯ ಬಡಾವಣೆಗಳಲ್ಲಿ ದೊಡ್ಡ ನಿವೇಶನಗಳನ್ನು ಯಾರಿಗೂ ಹಂಚಿಕೆ ಮಾಡದೇ ಹಾಗೆಯೇ ಖಾಲಿ ಬಿಟ್ಟು ತಾತ್ಕಾಲಿಕವಾಗಿ ಖಾಸಗೀ ವ್ಯಕ್ತಿಗಳಿಗೆ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಸರಕಾರಕ್ಕೆ ನಷ್ಟವನ್ನು ಮಾಡಿರುವುದು ಪತ್ತೆಯಾಗಿದೆ.

ಜಮೀನು ಮಾಲೀಕರಿಂದ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡು ಜಮೀನು ಮಾಲೀಕರಿಗೆ ಪರಿಹಾರವನ್ನು ನೀಡಿ, ಭೂ ಮಾಲೀಕರಿಗೆ ಹಂಚಿಕೆಯಾಗಿದ್ದ ನಿವೇಶನಗಳನ್ನು ವಾಪಸ್ಸು ಬಿಡಿಎಗೆ ವಶಪಡಿಸಿಕೊಳ್ಳದೇ ಬೇರೆಯವರಿಗೆ ಹಂಚಿಕೆ ಮಾಡಿರುವುದು ಕಂಡುಬಂದಿದೆ.

ಮೂಲೆ ನಿವೇಶನ(ಕಾರ್ನರ್ ಸೈಟ್)ಗಳನ್ನು ಹರಾಜು ಪ್ರಕ್ರಿಯೆ ಮುಖಾಂತರ ಮಾರಾಟ ಮಾಡಬೇಕು. ಆದರೆ, ಹರಾಜು ಪ್ರಕ್ರಿಯೆ ಮಾಡದೇ ಮೂಲೆ ನಿವೇಶನ(ಕಾರ್ನರ್ ಸೈಟ್)ಗಳನ್ನು ಹಂಚಿಕೆ ಮಾಡಿ ಸರಕಾರಕ್ಕೆ ನಷ್ಟವನ್ನುಂಟು ಮಾಡಿರುವುದು ಕಂಡುಬಂದಿದೆ.

ವಿಭಾಗ ಕಚೇರಿಗಳಲ್ಲಿ ಕಡತಗಳ ಸಂಖ್ಯೆಯ ಆಧಾರದ ಮೇಲೆ ಖಚಿತ ಅಳತೆ ರೆಕಾರ್ಡ್ ಅನ್ನು ನಿರ್ವಹಣೆ ಮಾಡಬೇಕು. ಆದರೆ, ವಿಭಾಗ ಕಚೇರಿಗಳಲ್ಲಿ ಖಚಿತ ಅಳತೆಯ ರೆಕಾರ್ಡ್‌ಗಳನ್ನು ನಿರ್ವಹಣೆ ಮಾಡದಿರುವುದು ಪತ್ತೆಯಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸಂಬಂಧಪಟ್ಟಂತೆ ಭೂ ಸ್ವಾಧೀನಪಡಿಸಿಕೊಂಡು, ಪರಿಹಾರವನ್ನು ನೈಜ ಜಮೀನು ಮಾಲೀಕರಿಗೆ ನೀಡದೇ 3ನೇ ವ್ಯಕ್ತಿಗೆ ನೀಡಿರುವುದು ಕಂಡುಬಂದಿದೆ.

ಎಲ್ಲ ಐದು ಕಚೇರಿಗಳಲ್ಲಿ ಶೋಧನಾ ಕಾರ್ಯ ಮುಂದುವರೆದಿದೆ. ಮಂಗಳವಾರವೂ ಬಿಡಿಎ ಕಚೇರಿಯಲ್ಲಿನ ಅವ್ಯವಹಾರದ ಕುರಿತು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಬಿಡಿಎ ಕಚೇರಿಯಲ್ಲಿನ ಅವ್ಯಹಾರದ ಕುರಿತು ಲಿಖಿತ ದೂರನ್ನು ದಾಖಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss