ಆಟೋ ಹತ್ತೋ ಮುನ್ನವೇ ‘ಒಟಿಪಿ ಹೇಳಿ’ ಎಂದು ಆಟೋ ಅಂಕಲ್ ಹೇಳಿದಾಗ ಅವರ ಮುಖ ನೋಡಿದ್ದು, ಕಣ್ಣಿನ ಮೂಲೆಯಲ್ಲೆಲ್ಲೋ ನೀರಿದ್ದಂತೆ ಕಾಣಿಸಿತ್ತು.
‘ಆಟೋ ಓಡಿಸಿದಾಗ ಧೂಳು ಬೀಳಬಹುದು, ಗಾಳಿಗೆ ಕಣ್ಣೀರು ಬಂದಿರಬಹುದು, ನನಗೇನಾಗಬೇಕು’ ಎಂದು ಸುಮ್ಮನೆ ಹಿಂದೆ ಕುಳಿತಿದ್ದಾಯ್ತು.
ಕುಳಿತ ಎರಡೇ ನಿಮಿಷದಲ್ಲಿ ಅಂಕಲ್ ಮಾತನಾಡೋಕೆ ಶುರು ಮಾಡಿದ್ರು, ಗಾಳಿಗೆ ಅವರು ಮಾತನಾಡಿದ್ದು ಅರ್ಧಬಂರ್ಧ ಅಷ್ಟೇ ಕೇಳುತ್ತಿತ್ತು.‘ಈಗ ನಾನೇನು ಮಾಡಲಿ, ಪಾಪ ಅವರು, ಎಲ್ಲಿಗೆ ಹೋಗೋದೋ ಏನೋ ಒಂದೂ ಅರ್ಥ ಆಗ್ತಿಲ್ಲ’ ಎಂದೆಲ್ಲಾ ಮಾತನಾಡಿದ್ರು. ಒಮ್ಮೆ ಇವರಿಗೆ ಅಡ್ರೆಸ್ ಸರಿಯಾಗಿ ತಿಳಿದಿಲ್ವೇನೋ, ಸರಿ ಮಾಡಿಬಿಡೋಣ ಎಂದು ‘ಅಂಕಲ್ ಇಲ್ಲೇ ರೈಟ್ ಹೊಡೀರಿ’ ಎಂದಿದ್ದಾಯ್ತು.
ಒಂಚೂರು ರಿಯಾಕ್ಷನ್ ಇಲ್ಲದಂತೆ ರೈಟ್ ತಿರುಗಿಸಿದರು. ಆದರೆ ಮಾತು ಮಾತ್ರ ನಿಂತಿಲ್ಲ. ‘ನನಗೆ 44 ವರ್ಷ ಈಗಲೂ ಮದ್ವೆ ಆಗಿಲ್ಲ, ಆಗೋದೂ ಇಲ್ಲ. ಹಂಗಂತ ಅವಳಿಗಾಗಿ ಕಾಯ್ತಾ ಇದ್ದೀನಿ ಅಂತಲ್ಲ. ಅವಳು ಚೆನ್ನಾಗಿರಬೇಕಷ್ಟೆ”ಪಕ್ಕಾ ಇವರು ಕುಡ್ಕೊಂಡು ಗಾಡಿ ಓಡಿಸ್ತಿದ್ದಾರೆ, ಇವರ ಮದ್ವೆ ಕಥೆ ನನಗ್ಯಾಕೆ?’ ಯಾಕೋ ಡೌಟು ಬಂದು ಮನೆಮಂದಿಗೆಲ್ಲಾ ಲೈವ್ ಲೊಕೇಷನ್ ಕಳಿಸಿದ್ದಾಯ್ತು.
ಆದರೆ ಅವರಿಗೆ ಮಾತನಾಡೋಕೆ ಜನ ಬೇಕಿತ್ತಷ್ಟೇ, ಕಥೆ ಕೇಳೋ ಕಿವಿ ನಾನಾದೆ. ನನಗಾದ್ರೂ ಏನ್ ಕೆಲಸ ಇತ್ತು, ಇದನ್ನೂ ಕೇಳಿಬಿಡೋಣ. ಅಂಕಲ್ ಮತ್ತೆ ಮುಂದುವರಿದು, ‘ಆಕೆಯನ್ನು ಕಾಲೇಜಿನಿಂದ ಪ್ರೀತಿಸಿದ್ದೆ, ಅವಳು ಪ್ರೀತಿಸಿದ್ಲೋ ಇಲ್ಲವೋ ಗೊತ್ತಿಲ್ಲ. ನನ್ನ ನೋಡಿದ್ರೆ ನಗ್ತಿದ್ಲು, ತಿನ್ನೋಕೆ ತಂದಾಗ ಕೊಡ್ತಾ ಇದ್ಲು. ನಾನು ದಡ್ಡ ಇದನ್ನೇ ಸ್ವಲ್ಪ ಜಾಸ್ತಿನೇ ಪ್ರೀತಿ ಅಂದುಕೊಂಡುಬಿಟ್ಟೆ. ಇದೆಲ್ಲಾ ಆಗಿದ್ದು ತುಂಬಾ ವರ್ಷದ ಹಿಂದೆ. ಆದರೆ ಈಗ ಅವಳಿಗೆ ಮದುವೆ ಆಗಿದೆ, ಮಗಳು ಇದ್ದಾಳೆ. ದಿನವೂ ಆಕೆ ನನ್ನ ಆಟೋದಲ್ಲೇ ಕಾಲೇಜ್ಗೆ ಬರ್ತಾಳೆ. ಅಂಕಲ್ ಅಂತ ಬಾಯ್ತುಂಬ ಕರಿತಾಳೆ’ ಅಂಕಲ್ ಕಣ್ಣೀರು ಗಾಳಿ ರಭಸಕ್ಕೆ ಹಿಂದಿನ ಸೀಟಿಗೂ ಬಡಿಯಿತು!
ಅವರ ಮಾತಿನ ಫ್ಲೋ ಕಟ್ ಮಾಡುವಷ್ಟು ದೊಡ್ಡವಳಲ್ಲ, ಆದರೂ ಈಗ ‘ನೀವು ಬೇಜಾರಾಗಿರೋದು ಯಾಕೆ’ ಎಂದು ಕೇಳಲೇಬೇಕಾಯ್ತು.
‘ಅವಳ ಗಂಡನಿಗೆ ಆಕ್ಸಿಡೆಂಟ್ ಆಗಿದೆಯಮ್ಮಾ, ಹೋಗ್ಬಿಟ್ರಂತೆ, ಮಗಳು ಅತ್ಕೋತಾ ಆಸ್ಪತ್ರೆಗೆ ಬಿಡಿಸ್ಕೊಂಡ್ಲು. ಗಂಡ ಹೆಂಡತಿ ತುಂಬಾ ಚೆನ್ನಾಗಿದ್ರು. ಈಗ ಹೇಗೆ ಜೀವನ ಮಾಡ್ತಾಳೋ ಗೊತ್ತಿಲ್ಲ!’ ಎಂದರು.