ವಿಶ್ವಪಡೆ ಶಾಂತಿ ಪಾಲಕರಾಗಿ ಭಾರತೀಯ ಯೋಧರ ಅಸಾಮಾನ್ಯ ಮಾನವೀಯ ಸೇವೆಗೆ ಶ್ಲಾಘನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಸೂಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ 1160 ಮಂದಿ ಭಾರತೀಯ ಯೋಧರು ಕೇವಲ ನಾಗರಿಕರ ರಕ್ಷಣೆಯಲ್ಲಷ್ಟೇ ತೊಡಗಿರದೆ, ಅಲ್ಲಿನ ಸ್ಥಳೀಯ ಸಮುದಾಯಗಳ ಬದುಕಿನ ಸಾಮರ್ಥ್ಯ ವೃದ್ಧಿಸುತ್ತಿದ್ದಾರೆ. ರಸ್ತೆಗಳ ಪುನರ್ನಿರ್ಮಾಣ, ಜನರು ಮತ್ತು ಪಶುಗಳಿಗೆ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯಲ್ಲಿ ಅದ್ಭುತ ಮಾನವೀಯ ಸೇವೆಯಲ್ಲಿ ತೊಡಗಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಇದೀಗ ಕಲಹಗ್ರಸ್ತ ಸೂಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ 1100ಕ್ಕೂ ಅಧಿಕ ಭಾರತೀಯ ಶಾಂತಿಪಾಲನಾ ಯೋಧರಿಗೆ ವಿಶ್ವಸಂಸ್ಥೆಯ ವಿಶೇಷ ಪದಕಗಳನ್ನು ನೀಡಿ ಪುರಸ್ಕರಿಸಲಾಗಿದೆ.
ಮೇಲ್ ನೈಲ್ ರಾಜ್ಯದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ತೊಡಗಿರುವ ಈ ಯೋಧರ ಕಾರ್ಯ ಮಹೋನ್ನತವಾದುದು ಮತ್ತು ಬಹುಮುಖಿಯಾದುದು. ನಾಗರಿಕರ ರಕ್ಷಣೆಯೊಂದಿಗೆ ಇಂಜಿನಿಯರಿಂಗ್ ಮೂಲಕ ನಿರ್ಮಾಣ ಯೋಜನೆಗಳಲ್ಲಿ ಮತ್ತು ಮಾನವ ಹಾಗೂ ಪಶುಗಳ ವೈದ್ಯಕೀಯ ಸೇವೆಯಲ್ಲೂ ತೊಡಗಿಕೊಡಿದ್ದಾರೆ ಎಂಬುದಾಗಿ ಯುಎನ್‌ಎಂಐಎಸ್‌ಎಸ್ ವೆಬ್‌ಸೈಟಿನಲ್ಲಿ ಶ್ಲಾಘಿಸಲಾಗಿದೆ.
ಮಾಲಕಾಲ್‌ನಿಂದ ಬಾಲಿಯೆಟ್ ಆಗಿ ಅಬ್ವಾಂಗ್‌ಗೆ 75 ಕಿ.ಮೀ.ಉದ್ದದ ರಸ್ತೆ ಅಭಿವೃದ್ಧಿ ಪಡಿಸಿದ್ದನ್ನು ಹಾಗೂ ಸಂಚಾರಿ ಪಶು ಚಿಕಿತ್ಸಾ ಕೇಂದ್ರಗಳ ಮೂಲಕ ಹಸು, ಆಡು, ಕತ್ತೆ, ಕುರಿ ಮತ್ತಿತರ ಸಾಕು ಪ್ರಾಣಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿರುವುದನ್ನೂ ಅದರಲ್ಲಿ ಉಲ್ಲೇಖಿಸಲಾಗಿದೆ. ಕೇವಲ 2 ದಿನಗಳಲ್ಲಿ 1,749 ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ ಬಗ್ಗೆ ಅದು ಮೆಚ್ಚುಗೆ ವ್ಯಕ್ತಪಡಿಸಿದೆ. ಮಳೆ ನೀರು ಕೊಯ್ಲು, ಜನರಿಗೆ ಆದಾಯ ಮೂಲಗಳನ್ನು ಹೆಚ್ಚಿಸಿ ಕುಟುಂಬಗಳ ಬದುಕಿಗೆ ಬಲ ನೀಡಲು ಬಾಲಕ ಬಾಲಕಿಯರಿಗೆ ಕಂಪ್ಯೂಟರ್ ಶಿಕ್ಷಣ ಸಹಿತ ಕೌಶಲ ತರಬೇತಿ ನೀಡುತ್ತಿರುವ ಬಗ್ಗೆ ಕ.ವಿಜಯ್ ರಾವತ್ ಅವರನ್ನು ಉಲ್ಲೇಖಿಸಿ ವೆಬ್‌ಸೈಟ್ ಶ್ಲಾಘಿಸಿದೆ. ಮಹಿಳೆಯರ ವಿರುದ್ಧದ ಹಿಂಸೆ ತಡೆಯುವಲ್ಲೂ ನಾವು ನೆರವಾಗುತ್ತಿದ್ದೇವೆ. ಈ ಗೌರವ ನಮಗೆ ಸಾರ್ಥಕ್ಯ ಭಾವವನ್ನುಂಟು ಮಾಡಿದೆ ಎಂದು ಈ ಭಾರತೀಯ ಪಡೆಯಲ್ಲಿರುವ ಇಬ್ಬರು ಮಹಿಳೆಯರ ಪೈಕಿ ಮೇಜರ್ ಪೂಜಾ ನಾಯರ್ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!