ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಮಂಗಳೂರು:
ಬೆಂಗಳೂರು ದಕ್ಷಿಣ ವಲಯ ಮಾತ್ರವಲ್ಲ ಎಲ್ಲ ವಲಯಗಳ ವಾರ್ ರೂಮ್ ಗಳಲ್ಲೂ ಬೆಡ್ ಬುಕ್ಕಿಂಗ್ ಜಾಲ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ವಾರ್ ರೂಮ್ ಗಳನ್ನೂ ತಕ್ಷಣ ರದ್ದು ಮಾಡಬೇಕು. ಈ ಹಗರಣದ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಒತ್ತಾಯಿಸಿದ್ದಾರೆ.
ಬೆಂಗಳೂರು ದಕ್ಷಿಣ ಕೋಟೆಡ್ ವಾರ್ ರೂಮ್ ನಲ್ಲಿ ಬುಧವಾರ ರಾತ್ರಿಯೂ ಬೆಡ್ ಬುಕಿಂಗ್ ದಂಧೆ ನಡೆದಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಾರ್ ರೂಮ್ ನಲ್ಲಿ ಎಲ್ಲ ನೌಕರರನ್ನೂ ತಕ್ಷಣ ವಜಾ ಮಾಡಬೇಕು. ನ್ಯಾಯಾಂಗ ತನಿಖೆಯ ಬಳಿಕ ತಪ್ಪಿತಸ್ಥರಲ್ಲ ಎಂದು ಗೊತ್ತಾದ ಸಿಬ್ಬಂದಿಯನ್ನು ಮಹಾನಗರಪಾಲಿಕೆ ಮರುನೇಮಕ ಮಾಡಿಕೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದ ಕೋವಿಡ್ ಆಸ್ಪತ್ರೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 12 ಕ್ಕೂ ಹೆಚ್ಚು ಆಸ್ಪತ್ರೆಗಳು ಇದರಲ್ಲಿ ಶಾಮೀಲಾಗಿವೆ ಎನ್ನಲಾಗುತ್ತಿದೆ. ಸರಕಾರ ಈ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ 1792 ಟನ್ ಆಮ್ಲಜನಕದ ಅವಶ್ಯಕತೆಯಿದೆ. ಆಮ್ಲಜನಕ ಸಿಗದ ಚಾಮರಾಜನಗರ, ಕಲ್ಬುರ್ಗಿ, ವಿಜಯಪುರ ಮತ್ತು ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ಒಟ್ಟು 34 ರೋಗಿಗಳು ಸಾವನ್ನಪ್ಪಿದ್ದಾರೆ. ರಾಜ್ಯಕ್ಕೆ ಆಮ್ಲಜನಕ ಪೂರೈಸುವಲ್ಲಿ ಕೇಂದ್ರದ ಬಿಜೆಪಿ ಸರಕಾರ ಬೇಕೆಂದೇ ತಾರತಮ್ಯ ಮತ್ತು ವಿಳಂಬ ಮಾಡುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಬೇಕಾದ ಆಮ್ಲಜನಕ ಪೂರೈಕೆಗೆ ವಿಫಲರಾಗಿರುವ ರಾಜ್ಯದ ಬಿಜೆಪಿಯ ಎಲ್ಲ ಸಂಸತ್ ಸದಸ್ಯರೂ ತಕ್ಷಣ ರಾಜೀನಾಮ ನೀಡಬೇಕು. ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಮೊದಲು ರಾಜೀನಾಮೆ ನೀಡಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಫಾರೂಕ್ ಹೇಳಿದ್ದಾರೆ.